ಮ್ಯಾಮ್ಕೋಸ್‌ಗೆ 4.41 ಕೋಟಿ ರೂ. ಲಾಭ

mamcos
Published on

ಶಿವಮೊಗ್ಗ: ಅಡಕೆ ಬೆಳೆಗಾರರ ಹಿತಕಾಯಲು ನಮ್ಮ ಸಂಸ್ಥೆ ಬದ್ಧವಾಗಿದೆ. ಸಹಕಾರಿ ವಲಯದೊಳಗೆ ಅಡಕೆಗೆ ಸುರಕ್ಷಿತ ಸ್ಥಾನ ಒದಗಿಸಲು ನಮ್ಮ ಪ್ರಯತ್ನ ಮುಂದುವರಿದಿದೆ. ಈಗಾಗಲೇ ನಮ್ಮ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಆಮದು ಸುಂಕ ಹೆಚ್ಚಿಸಿದೆ. ಅಡಕೆ ಮೇಲಿನ ಜಿಎಸ್‌ಟಿ ತೆರವಿಗೆ ಮನವಿ ಮಾಡಲಾಗಿತ್ತು ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ನಮ್ಮ ಪ್ರಯತ್ನ ನಿರಂತರವಾಗಿದೆ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ ತಿಳಿಸಿದರು.

ಮ್ಯಾಮ್ಕೋಸ್ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ಶಿವಮೊಗ್ಗ ತಾಲೂಕು ಷೇರುದಾರರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಮ್ಯಾಮ್ಕೋಸ್ ಉತ್ತಮವಾಗಿ ಬೆಳೆಯುತ್ತಿದೆ. ಷೇರುದಾರರ ಸಂಖ್ಯೆಯೂ ಹೆಚ್ಚುತ್ತಿದೆ. ಲಾಭದ ಪ್ರಮಾಣವೂ ವೃದ್ಧಿಯಾಗುತ್ತಿದೆ. ನಾವು ಅನೇಕ ಸೌಲಭ್ಯಗಳನ್ನು ಸದಸ್ಯರಿಗೆ ನೀಡುತ್ತಿದ್ದೇವೆ. ಇದನ್ನು ಮುಂದುವರಿಸುತ್ತೇವೆ ಎಂದು ಭರವಸೆ ನೀಡಿದರು.
ಕಳೆದ ಆರ್ಥಿಕ ವರ್ಷದಲ್ಲಿ ಮ್ಯಾಮ್ಕೋಸ್ 3.91 ಕೋಟಿ ರೂ. ಲಾಭ ಗಳಿಸಿತ್ತು. ಈ ವರ್ಷ 4.41 ಕೋಟಿ ರೂ. ಲಾಭಗಳಿಸಿದೆ. ಈ ಬಾರಿ 404 ಕೋಟಿ ರೂ. ಹೆಚ್ಚುವರಿ ವ್ಯವಹಾರ ಮಾಡಲಾಗಿದೆ. ಅದೇ ರೀತಿ ಸದಸ್ಯರಿಗೆ ನೀಡುತ್ತಿರುವ ವಿವಿಧ ನೆರವುಗಳ ಪೈಕಿ ಎರಡು ಲಕ್ಷ ರೂ.ವರೆಗೆ ಕಟಾವು ಸಾಲ ನೀಡಲಾಗುತ್ತಿದೆ. ಠೇವಣಿ ಇರಿಸಿದ ಸದಸ್ಯರಿಗೆ 10 ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು. ಬೆಳೆಗಾರರು ಕಳಿಸುವ ಅಡಕೆಯ ಒಟ್ಟು ಪ್ರಮಾಣದ ಶೇ.60 ಮುಂಗಡ ನೀಡಲಾಗುತ್ತಿದೆ. ಔಷಧ ಸಿಂಪರಣೆಗೆ 50 ಸಾವಿರ ರೂ.ವರೆಗೂ ಸಾಲ ನೀಡಲಾಗುವುದು ಎಂದರು.
ಸಭೆಗೆ ಜೈ ಎಂದ ಸದಸ್ಯರು: ತಾಲೂಕು ಮಟ್ಟದಲ್ಲಿ ಮ್ಯಾಮ್ಕೋಸ್ ಷೇರುದಾರರ ಸಭೆ ನಡೆಸುತ್ತಿರುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸಂಸ್ಥೆಗೆ ಆರ್ಥಿಕ ಹೊರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಬೆಳೆಗಾರರು ಹಾಗೂ ಬೆಳೆಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸಭೆ ಅನಿವಾರ್ಯ ಎಂದು ಎಚ್.ಎಸ್.ಮಹೇಶ್ ಹುಲ್ಕುಳಿ ಸಭೆಗೆ ತಿಳಿಸಿದರು. ಇದಕ್ಕೆ ಅನುಮೋದನೆ ನೀಡಿದ ಸದಸ್ಯರಾದ ಎಚ್.ಎಂ.ಚಂದ್ರಶೇಖರಪ್ಪ, ದೇವಕುಮಾರ್ ಮುಂತಾದವರು ಸಭೆ ನಡೆಸುವುದು ಉತ್ತಮ ಬೆಳವಣಿಗೆ. ಸರ್ವಸದಸ್ಯರ ಸಭೆಯಲ್ಲಿ ಎಲ್ಲರಿಗೂ ಮಾತನಾಡಲು, ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಸಿಗುವುದಿಲ್ಲ ಎಂದರು.
ನಿರ್ದೇಶಕರಾದ ಸಿ.ಬಿ.ಈಶ್ವರ್, ನರೇಂದ್ರ, ಬಡಿಯಣ್ಣ, ದಿನೇಶ್ ಬರದಳ್ಳಿ, ವಿರೂಪಾಕ್ಷಪ್ಪ, ರತ್ನಾಕರ್, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net