3ನೇ ಹಂತ ಶಾಂತಿಯುತ 93 ಕ್ಷೇತ್ರಗಳಲ್ಲಿ ಮತದಾನ

vote
Published on

ನವದೆಹಲಿ: ಹದಿನೆಂಟನೇ ಲೋಕಸಭೆ ಚುನಾವಣೆಯ ಮೂರನೇ ಹಂತ ಮಂಗಳವಾರ ಶಾಂತಿಯುತವಾಗಿ ಸಂಪನ್ನಗೊಂಡಿತು. ಬಿಸಿಲಿನ ತೀವ್ರತೆಯನ್ನು ಲೆಕ್ಕಿಸದೆ ಮತದಾರರು ಪ್ರಜಾಪ್ರಭುತ್ವದ ಮಹಾ ಉತ್ಸವದಲ್ಲಿ ಭಾರಿ ಉತ್ಸಾಹದಿಂದ ಭಾಗಿಯಾದರು. ವಯೋವೃಧ್ಧರು, ಅಂಗವಿಕಲರು, ಮಹಿಳೆಯರು ತಮ್ಮ ಹಕ್ಕು ಚಲಾಯಿಸಿ ಸಂತಸ ಪಟ್ಟರು. ಸಮಾಜದ ವಿವಿಧ ರಂಗಗಳ ಗಣ್ಯರು ಮತದಾನ ಮಾಡಿದ್ದಲ್ಲದೆ, ಮತದಾನ ಜಾಗೃತಿಯ ಸಂದೇಶ ವನ್ನೂ ನೀಡಿದರು.

ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಹತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 93 ಕ್ಷೇತ್ರಗಳಲ್ಲಿ ಶೇಕಡ 63.35ರಷ್ಟು ಮತದಾನ ನಡೆದಿದೆ. ಅಸ್ಸಾಂನಲ್ಲಿ ಹೆಚ್ಚು ಮತ್ತು ಉತ್ತರಪ್ರದೇಶದಲ್ಲಿ ಕಡಿಮೆ ಮತದಾನ ದಾಖಲಾಗಿದೆ. ಏಳು ಕೇಂದ್ರ ಸಚಿವರು, ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಪ್ರತಿಷ್ಠಿತರ ಭವಿಷ್ಯ ಇವಿಎಂನಲ್ಲಿ ಭದ್ರವಾಯಿತು.

ಜಮ್ಮು-ಕಾಶ್ಮೀರದ ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದು, ಮೇ 25ರಂದು ಮತದಾನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡ್ವಿಯಾ ಮುಂತಾದವರೂ ಇದೇ ಹಂತದಲ್ಲಿ ಮತ ಚಲಾಯಿಸಿರುವುದು ಗಮನಾರ್ಹ.

ಕಳೆದ 2 ಹಂತಗಳ ಮತಪ್ರಮಾಣ: ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ (ಏಪ್ರಿಲ್ 19) ಒಟ್ಟಾರೆ ಶೇಕಡ 66.14 ಮತ್ತು ಎರಡನೇ ಹಂತದಲ್ಲಿ (ಏಪ್ರಿಲ್ 26) ಶೇ.66.71 ಮತದಾನ ದಾಖಲಾಗಿತ್ತು. ಮೊದಲ ಹಂತದಲ್ಲಿ ಶೇ.66.22 ಪುರುಷರು, ಶೇ.66.07 ಮಹಿಳೆಯರು ಮತ ಚಲಾಯಿಸಿದ್ದಾರೆ. ಎರಡನೇ ಹಂತದಲ್ಲಿ ಶೇ.66.99 ಪುರುಷ ಮತದಾರರು, ಶೇ.66.42 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

2ನೇ ಹಂತದ್ದೂ 3ನೇ ಹಂತದಲ್ಲಿ..: 2ನೇ ಹಂತದ ಚುನಾವಣೆಯಲ್ಲಿ ಮಧ್ಯಪ್ರದೇಶದ ಬೇತುಲ್ ಲೋಕ ಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಮೃತಪಟ್ಟ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಚುನಾವಣೆಯೂ ಇದೇ 3ನೇ ಹಂತದಲ್ಲಿ ನಡೆಯಿತು.

ಗಣ್ಯರಿಂದ ಮತದಾನ: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಡಿಂಪಲ್ ಯಾದವ್, ಎನ್​ಸಿಪಿ ಪಕ್ಷದ ಸುಪ್ರಿಯಾ ಸುಲೆ, ಅಜಿತ್ ಪವಾರ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಮುಂತಾದವರು ಮತ ಚಲಾಯಿಸಿದರು.

ಇನ್ನೆಷ್ಟು ಹಂತ? ಯಾವಾಗ ರಿಸಲ್ಟ್?: ಈ ಸಲದ ಲೋಕಸಭಾ ಚುನಾವಣೆ ದೇಶಾದ್ಯಂತ 7 ಹಂತಗಳಲ್ಲಿ ನಡೆಯುತ್ತಿದ್ದು, ಈವರೆಗೆ 3 ಹಂತಗಳು ಮುಗಿದಿವೆ. ಏಪ್ರಿಲ್ 19 ಮತ್ತು 26ರಂದು ಮೊದಲ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ನಾಲ್ಕನೇ ಹಂತದ ಮತದಾನ 10 ರಾಜ್ಯಗಳ 96 ಕ್ಷೇತ್ರಗಳಿಗೆ ಮೇ 13ರಂದು ನಡೆಯಲಿದೆ. 4ನೇ ಹಂತ ಮೇ 13ರಂದು, 5ನೇ ಹಂತ ಮೇ 20ರಂದು, 6ನೇ ಹಂತ ಮೇ 25ರಂದು ಮತ್ತು ಕೊನೆಯ ಹಂತ ಜೂನ್ 1ರಂದು ನಡೆಯಲಿವೆ. ಫಲಿತಾಂಶ ಜೂನ್ 4ರಂದು ಹೊರಬೀಳಲಿದೆ.

19 ರಾಜ್ಯ-ಕೇಂದ್ರಾಡಳಿತ ಪ್ರದೇಶಗಳಲ್ಲಿ ವೋಟಿಂಗ್ ಪೂರ್ಣ: ಕರ್ನಾಟಕ, ರಾಜಸ್ಥಾನ, ಗುಜರಾತ್, ಛತ್ತೀಸ್​ಗಢ, ಕೇರಳ, ತಮಿಳುನಾಡು, ಮೇಘಾಲಯ, ಮೀಜೋರಂ, ನಾಗಾಲ್ಯಾಂಡ್, ಉತ್ತರಾಖಂಡ, ತ್ರಿಪುರಾ, ಅಂಡಮಾನ್-ನಿಕೋಬಾರ, ಪುದುಚೇರಿ, ಲಕ್ಷದ್ವೀಪ, ಸಿಕ್ಕಿಂ, ಅಸ್ಸಾಂ, ಗೋವಾ, ದಾದರ್ ನಗರ-ಹವೇಲಿ, ದಮನ್ ಮತ್ತು ದಿಯು.

ಬಿಜೆಪಿ ಪ್ರಭಾವ: ಮೂರನೇ ಹಂತದ ಚುನಾವಣೆಯು ಬಿಜೆಪಿಯ ಪ್ರಭಾವ ಇರುವ ಕ್ಷೇತ್ರಗಳನ್ನು ಒಳಗೊಂಡಿರುವುದು ವಿಶೇಷ. ಮಂಗಳವಾರ ಚುನಾವಣೆ ನಡೆದ 93 ಕ್ಷೇತ್ರಗಳ ಪೈಕಿ, 2019ರಲ್ಲಿ 72 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಅದರಲ್ಲೂ ಗುಜರಾತ್​ನಲ್ಲೇ 26 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಯುಪಿಎ ಒಕ್ಕೂಟ 8 ಹಾಗೂ ಇತರರು 8 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net