371 ಜೆ ಮೀಸಲಾತಿ ಗೊಂದಲದ ಬಗ್ಗೆ ರಾಜ್ಯಪಾಲರಿಗೆ ದೂರು

PSI
Published on

ಬೆಂಗಳೂರು: ಸಂವಿಧಾನ ಕಲಂ 371ಜೆ ಮೀಸಲಾತಿ ಅನ್ವಯ ಹೈ-ಕರ್ನಾಟಕ ಭಾಗದ ಮೀಸಲಾತಿಯನ್ನು ನೀಡದೇ ಅವೈಜ್ಞಾನಿಕವಾಗಿ ಸುತ್ತೋಲೆಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಇದರಿಂದ ಉಳಿದ 24 ಜಿಲ್ಲೆಗಳ ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಹಸಿರು ಪ್ರತಿಷ್ಠಾನ ದೂರು ಸಲ್ಲಿಸಿದೆ.

ಸಂವಿಧಾನ ಕಲಂ 371ಜೆ ಅನ್ವಯ ಹೈ-ಕರ್ನಾಟಕ ಭಾಗದ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸಿ ಉಳಿದ 24 ಜಿಲ್ಲೆಗಳ ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಹಸಿರು ಪ್ರತಿಷ್ಠಾನ ದೂರು ಸಲ್ಲಿಸಿದೆ.

ಹಸಿರು ಪ್ರತಿಷ್ಠಾನ ಅಧ್ಯಕ್ಷ ಕೆ.ಜಿ. ಕುಮಾರ್,ಇತಿಹಾಸ ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡ ನೇತೃತ್ವದ ನಿಯೋಗ, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಿಗೆ ಮನವಿ ಪತ್ರ ಸಲ್ಲಿಸಿದೆ.

371 ಜೆ ಮೀಸಲಾತಿ ಮತ್ತು ರಾಜ್ಯ ಸರ್ಕಾರ ಹೊರಡಿಸುತ್ತಿರುವ 2023ರ ಸುತ್ತೋಲೆಗೂ ವ್ಯಾತ್ಯಾಸವಿದೆ. ಈ ಸುತ್ತೋಲೆಯಲ್ಲಿ ಮೆರಿಟ್ (ಅರ್ಹತಾ) ಪಟ್ಟಿ ತಯಾರಿಸಬೇಕು. ಅಭ್ಯರ್ಥಿ ಯಾವುದೇ ವೃಂದವನ್ನು ಆಯ್ಕೆ ಮಾಡಿಕೊಂಡಿದ್ದರು ಅದನ್ನು ಪರಿಗಣಿಸದೆ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮಿಕ್ಕುಳಿದ ವೃಂದಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಆನಂತರ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಬೇಕೆಂಬ ವಾದ ಸರಿಯಲ್ಲ. ಇದರಿಂದ ಮಿಕ್ಕುಳಿದ 24 ಜಿಲ್ಲೆಗಳ ವಿದ್ಯಾರ್ಥಿಗಳು ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗಲಿದೆ. ಈಗಾಗಲೇ ವಿವಿಧ ನೇಮಕಾತಿಯಲ್ಲಿ ಜಾರಿಗೆ ತಂದಿರುವ ಪರಿಣಾಮ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಸುತ್ತೋಲೆ ವಿರುದ್ಧ ತೀರ್ಪು ನೀಡಿದೆ. ಅಲ್ಲದೆ, ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

ವಿವಾದದ ಸುಳಿಯಲ್ಲಿ ಸಿಲುಕಿರುವ 545 ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯನ್ನು 2023ರ ಸುತ್ತೋಲೆ ಪ್ರಕಾರ ಆಯ್ಕೆಪಟ್ಟಿ ಬಿಡುಗಡೆ ಮಾಡಬೇಕಾ ಅಥವಾ 2021ರ ಅಧಿಸೂಚನೆ ಪ್ರಕಾರವೇ ಆಯ್ಕೆಪಟ್ಟಿ ಪ್ರಕಟಿಸಬೇಕ ಎಂದು ಸರ್ಕಾರದಲ್ಲಿ ಗೊಂದಲ ಉಂಟಾಗಿದೆ.

ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ 371 ಜೆ ಕಾಯ್ದೆಯಲ್ಲಿ ಸಿಗಬೇಕಾದ ಮೀಸಲಾತಿಗೆ ಕಲ್ಪಿಸಿದರೆ ಅಡ್ಡಿ ಇಲ್ಲ. ಸುತ್ತೋಲೆ ಜಾರಿಗೆ ತಂದು ಉಳಿದ ಜಿಲ್ಲೆಯ ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ಕೊಡಬೇಕೆಂದು ರಾಜ್ಯಪಾಲರಿಗೆ ಹಸಿರು ಪ್ರತಿಷ್ಠಾನ ಮನವಿ ಮಾಡಿದೆ.

ಜೂನ್ 1ಕ್ಕೆ ಪ್ರತಿಭಟನೆ :

371 ಜೆ ಮೀಸಲಾತಿ ಕುರಿತು ಸರ್ಕಾರ ಸ್ಪಷ್ಟ ಉತ್ತರ ಕೊಡಬೇಕು. ಒಂದು ವೇಳೆ 2023ರ ಸುತ್ತೋಲೆ ಪ್ರಕಾರ ಮೀಸಲಾತಿ ಜಾರಿಗೆ ತಂದರೇ ಜೂನ್ 1ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net