

Bihar Voter List: ಕಳೆದ ಕೆಲವು ದಿನಗಳಿಂದ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಸದ್ಯ ಗಂಭೀರ ತಿರುವನ್ನು ಪಡೆದುಕೊಂಡಿದೆ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಈ ಪ್ರಕರಣದಲ್ಲಿ ಮತದಾರರ ಪಟ್ಟಿ ವಿಚಾರದಲ್ಲಿ ಚುನಾವಣಾ ಆಯೋಗ ನಿರ್ವಹಿಸಿದ ರೀತಿಗೆ ನ್ಯಾಯಾಲಯ ತೀವ್ರವಾಗಿ ಟೀಕಿಸಿತು. ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿರುವ ಹೊರರಾಜ್ಯ, ಅನ್ಯ ದೇಶದ ನಿವಾಸಿಗಳಿಗೆ ಶೀಘ್ರವೇ ಗೇಟ್ಪಾಸ್ ಸಿಗಲಿದೆ.
ಬಿಹಾರದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (SIR) ಭಾಗವಾಗಿ ಚುನಾವಣಾ ಆಯೋಗವು ಮನೆ ಮನೆಗೆ ತೆರಳಿ ನಡೆಸಿದ ಸಮೀಕ್ಷೆಯಲ್ಲಿ ಅಚ್ಚರಿ ವಿಷಯಗಳು ಬೆಳಕಿಗೆ ಬಂದಿವೆ. ಈಗಿರುವ ಮತದಾರರ ಪಟ್ಟಿಯಲ್ಲಿ ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ದೇಶದ ಅನೇಕ ನಿವಾಸಿಗಳು ಪ್ರಸ್ತುತ ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ. ಈ ಕುರಿತು ಚುನಾವಣಾ ಸಂಸ್ಥೆಯ ಮೂಲಗಳು ಕಳವಳ ವ್ಯಕ್ತಪಡಿಸಿವೆ.
ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬಿಹಾರದ ಮತದಾರರ ಪಟ್ಟಿಯಿಂದ 35.5 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಕಿತ್ತು ಬಿಸಾಡಲಾಗುವುದು ಎಂದು ವರದಿಯಾಗಿದೆ. ಇವರೆಲ್ಲ ಬಿಹಾರ ರಾಜ್ಯಕ್ಕೆ ಸೇರದ ಪ್ರಜೆಗಳು ಎಂದು ಗುರುತಿಸಲಾಗಿದೆ. ದೇಶದ ಅನೇಕ ನಿವಾಸಿಗಳಾಗಿದ್ದರೂ ಭಾರತದ ಮೂಲ ದಾಖಲಾತಿಗಳಾದ ಪಡಿತರ ಚೀಟಿ, ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಹೊಂದಿರುವುದು ಅಚ್ಚರಿಗೆ ಕಾರಣವಾಗಿದೆ.
ಈವರೆಗೆ ಚುನಾವಣಾ ಆಯೋಗ (EC) 6.6 ಕೋಟಿ ಮತದಾರರು ತಮ್ಮ ಎಣಿಕೆ ನಮೂನೆಗಳನ್ನು ಸಲ್ಲಿಸಿದ್ದಾರೆ ಎಂದು ಬಹಿರಂಗಪಡಿಸಿದೆ. ಇದು ರಾಜ್ಯದ ಒಟ್ಟು ಮತದಾರರಲ್ಲಿ ಶೇ.88.18 ರಷ್ಟಿದೆ. ಮತದಾರರು ಜುಲೈ 25ರವರೆಗೆ ತಮ್ಮ ನಮೂನೆಗಳನ್ನು ಸಲ್ಲಿಸಲು ಸಮಯವಿದೆ. ಅದಾದ ಬಳಿಕ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ. ಹೊಸ ವರದಿಯ ಪ್ರಕಾರ, ಪಟ್ಟಿಯಲ್ಲಿರುವ 12.5 ಲಕ್ಷ ಮತದಾರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇನ್ನೂ ಶೇ.2.2 ಅಥವಾ 17.5 ಲಕ್ಷ ಮತದಾರರು ಬಿಹಾರದಿಂದ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದು, ರಾಜ್ಯದಲ್ಲಿ ನಡೆಯುವ ಮುಂಬರುವ ಚುನಾವಣೆಗಳಲ್ಲಿ ಅವರು ಮತ ಚಲಾಯಿಸಲು ಅರ್ಹರಲ್ಲ ಎಂದು ತಿಳಿಸಲಾಗಿದೆ. ಇನ್ನೂ ಶೇ.0.73ರಷ್ಟು ಅಂದರೆ, ಸುಮಾರು 5.5 ಲಕ್ಷ ಜನರು ಎರಡು ಬಾರಿ ನೋಂದಾಯಿಸಿಕೊಂಡಿರುವುದು ಕಂಡುಬಂದಿದೆ. ಒಟ್ಟಾರೆಯಾಗಿ, ಬಿಹಾರದ ಮತದಾರರ ಪಟ್ಟಿಯಿಂದ ಸುಮಾರು 35.5 ಲಕ್ಷ ಮತದಾರರನ್ನು ತೆಗೆದುಹಾಕಲಾಗುವುದು ಎಂದು ಚುನಾವಣಾ ಆಯೋಗ ಸೂಚಿಸಿದೆ,(ಏಜೆನ್ಸೀಸ್).