4 ಗಂಟೆಯಲ್ಲಿ 32 ಸಾವು: ಒಂದೇ ದಿನ 773 ಪ್ರಕರಣ, ಭಾರತದಲ್ಲಿ ಆರ್ಭಟ ಹೆಚ್ಚಿಸಿದ ಕರೊನಾ

Coronavirus Feb 20-10
Published on

ನವದೆಹಲಿ: ಕರೊನಾ ಮಹಾಮಾರಿಯ ಅಟ್ಟಹಾಸ ದಿನಕಳೆದಂತೆ ತೀವ್ರಗೊಳ್ಳುತ್ತಿದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 32 ಜನರು ಬಲಿಯಾಗಿದ್ದಾರೆ. ಒಂದೇ ದಿನ 773 ಹೊಸ ಸೋಂಕಿತ ಪ್ರಕರಣ ದೃಢಪಟ್ಟಿರುವುದು ಭಾರತದ ಸಂಭಾವ್ಯ ಪರಿಸ್ಥಿತಿ ಕುರಿತು ತೀವ್ರ ಕಳವಳ ಮೂಡಿಸಿದೆ. ಈ ಅಂಕಿಸಂಖ್ಯೆಗಳ ಆಘಾತದ ನಡುವೆಯೇ ಬುಧವಾರ ಸರ್ವಪಕ್ಷಗಳ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಏ.14ರ ಬಳಿಕವೂ ಜನತಾ ಕರ್ಫ್ಯೂ ವಿಸ್ತರಿಸುವ ಪರೋಕ್ಷ ಸುಳಿವು ಹೊರಹಾಕಿದ್ದಾರೆ. ಇತ್ತ ರಾಜ್ಯದಲ್ಲಿ ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 181ಕ್ಕೆ ಏರಿಕೆಯಾಗಿದೆ.

ಕರೊನಾ ಸೋಂಕು ದಿನಕಳೆದಂತೆ ದೇಶಾದ್ಯಂತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 5ಕ್ಕೂ ಹೆಚ್ಚು ರಾಜ್ಯಗಳು ಜನತಾ ಕರ್ಫ್ಯೂ ವಿಸ್ತರಿಸಬೇಕೆಂದು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು. ಇದಾದ ಬಳಿಕ 24 ಗಂಟೆಗಳ ಅವಧಿಯಲ್ಲಿ 32 ಸಾವಿನ ಪ್ರಕರಣ ಹಾಗೂ 773 ಸೋಂಕು ದೃಢಪಟ್ಟಿವೆ. ಒಟ್ಟಾರೆ ಸೋಂಕಿತರ ಸಂಖ್ಯೆ 5742ಕ್ಕೇರಿದರೆ ಸಾವಿನ ಸಂಖ್ಯೆ 174ಕ್ಕೆ ತಲುಪಿದೆ. ದೇಶದಲ್ಲಿ ಈವರೆಗೆ 502 ಕರೊನಾ ಸೋಂಕಿತರು ಚೇತರಿಸಿಕೊಂಡಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ಪ್ರಧಾನಿ ಸುಳಿವು: ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸರ್ವಪಕ್ಷಗಳ ಸಭೆಯಲ್ಲೂ ಲಾಕ್​ಡೌನ್ ವಿಸ್ತರಣೆ ಆಗಬೇಕೆಂಬ ಅಭಿಪ್ರಾಯ ಹೊರಹೊಮ್ಮಿತು. ಇದಾದ ಬಳಿಕ ಮೋದಿ ಕೂಡ ದೇಶವ್ಯಾಪಿ ಲಾಕ್​ಡೌನ್ ಮತ್ತೆ ಮುಂದುವರಿಸುವ ಸುಳಿವು ನೀಡಿದರು. ಹಾಗಿದ್ದರೂ, ಕರೊನಾ ಹರಡುವಿಕೆ ಕಡಿಮೆ ಇರುವ ಪ್ರದೇಶ, ಜಿಲ್ಲೆಗಳಲ್ಲಿ ಲಾಕ್​ಡೌನ್ ಸಡಿಲಗೊಳಿಸಿ, ಕೆಲ ಕ್ಷೇತ್ರಗಳಲ್ಲಿ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡುವ ಕುರಿತೂ ಚಿಂತನೆ ನಡೆದಿದೆ. ಈ ಸಂಬಂಧ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಾರಾಂತ್ಯದಲ್ಲಿ ಪ್ರಧಾನಿ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಲಿದ್ದು, ಲಾಕ್​ಡೌನ್ ಕುರಿತ ನಿರ್ಣಯ ಪ್ರಕಟಿಸಲಿದ್ದಾರೆ.

ಕರ್ನಾಟಕದಲ್ಲಿ ಕರೊನಾ ಸೋಂಕಿಗೆ 5ನೇ ಬಲಿಯಾಗಿದೆ. ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಲಬುರಗಿಯ 65 ವರ್ಷದ ವೃದ್ಧ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಇನ್ನೊಂದೆಡೆ ಬುಧವಾರ ಹೊಸದಾಗಿ 6 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 181ಕ್ಕೆ ಏರಿಕೆಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಮಂಡ್ಯ, ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಒಂದೊಂದು ಕರೊನಾ ಸೋಂಕಿತ ಪ್ರಕರಣಗಳು ವರದಿಯಾಗಿವೆ. 181 ಸೋಂಕಿತರಲ್ಲಿ ಈಗಾಗಲೇ ಐವರು ಮೃತಪಟ್ಟಿದ್ದು, 28 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

148 ರೋಗಿಗಳ ಪೈಕಿ ಒಬ್ಬರು ಗರ್ಭಿಣಿ ಸೇರಿದ್ದು, ಎಲ್ಲರನ್ನೂ ನಿಗದಿತ ಜಿಲ್ಲಾ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್​ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿ 43 ಆಕ್ಸಿಜನ್​ನಲ್ಲಿ ಹಾಗೂ ರೋಗಿ 101 ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು, ತುಮಕೂರು ಬೆಸ್ಟ್

ಕರೊನಾ ಸೋಂಕು ತಡೆಗಟ್ಟುವ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿರುವ ನಗರಗಳ ಪೈಕಿ ಕರ್ನಾಟಕದ ಬೆಂಗಳೂರು ಮತ್ತು ತುಮಕೂರು ಮಾದರಿಯಾಗಿವೆ. ಕ್ವಾರಂಟೈನ್​ನಲ್ಲಿರುವವರ ಮೇಲೆ ನಿಗಾ ಇರಿಸುವಿಕೆಯನ್ನು ಸ್ಮಾರ್ಟ್ ತಂತ್ರಜ್ಞಾನದ ಮೂಲಕ ಈ ನಗರಗಳಲ್ಲಿ ಅನುಷ್ಠಾನ ಮಾಡಲಾಗಿದ್ದು, ದೇಶದಲ್ಲಿ ಮುಂಚೂಣಿಯಲ್ಲಿವೆ ಎಂದು ಅರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net