

ಲುಧಿಯಾನಾ: ಇಲ್ಲಿನ ಹಣಕಾಸು ಸಂಸ್ಥೆಯೊಂದಕ್ಕೆ ನುಗ್ಗಿದ ಐವರು ಸಶಸ್ತ್ರ ಸಹಿತ ದರೋಡೆಕೋರರು ಸುಮಾರು 12 ಕೋಟಿ ರೂ.ಮೌಲ್ಯದ 30 ಕೆಜಿ ಚಿನ್ನಾಭರಣಗಳು ಮತ್ತು 3 ಲಕ್ಷ ರೂಪಾಯಿ ನಗದನ್ನು ಲೂಟಿ ಮಾಡಿದ್ದಾರೆ.
ಪಂಜಾಬ್ನ ಲುಧಿಯಾನಾದ ಗಿಲ್ ರಸ್ತೆಯಲ್ಲಿರುವ ಇಂಡಿಯಾ ಇನ್ಫೊಲಿನ್ ಫೈನಾನ್ಸ್ ಲಿಮಿಟೆಡ್(IIFL)ನಲ್ಲಿ ಸೋಮವಾರ ಬೆಳಗ್ಗೆ ದೊಡ್ಡ ಮಟ್ಟದ ದರೋಡೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿಸಿಟಿವಿಯಲ್ಲಿ ಕಂಡ ದೃಶ್ಯದ ಪ್ರಕಾರ, ಸಂಸ್ಥೆಗೆ ನುಗ್ಗಿದ ಐವರಲ್ಲಿ ಇಬ್ಬರು ಮುಸುಕು ಹಾಕಿಕೊಂಡಿದ್ದರು. ನಾಲ್ವರು ಮಾತ್ರ ಒಳಗೆ ಹೋಗಿ ಅಲ್ಲಿನ ಉದ್ಯೋಗಿಗಳಿಗೆ ಗನ್ ತೋರಿಸಿ ಬೆದರಿಸಿ ಲೂಟಿ ಮಾಡಿದ್ದಾರೆ. ಹೊರಗಡೆ ಒಬ್ಬ ಮಾರುತಿ ಸುಜುಕಿ ಕಾರನ್ನು ಸಿದ್ಧ ಮಾಡಿಟ್ಟುಕೊಂಡಿದ್ದ. ಹಣ, ಒಡವೆ ದೋಚಿಕೊಂಡು ಆ ವಾಹನದಲ್ಲಿ ಮರ್ಲೆಕೋಟ್ಲಾ ರಸ್ತೆ ಮೂಲಕ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ದರೋಡೆ ಕೋರರು ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್)ನ್ನು ಕೂಡ ತೆಗೆದುಕೊಂಡು ಹೋಗಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುವವರದ್ದೇ ಕೈವಾಡ ಇರುವ ಬಗ್ಗೆ ಸಂಶಯ ಉಂಟಾಗಿದೆ ಎಂದು ಹೇಳಿದ್ದಾರೆ.
ಪಂಜಾಬ್ ಪೊಲೀಸ್ ಅಪರಾಧ ಮತ್ತು ತನಿಖಾ ದಳದ ಕಚೇರಿಯ ಎದುರು ಸ್ವಲ್ಪೇ ದೂರದಲ್ಲಿ ಈ ಘಟನೆ ನಡೆದಿದೆ. ದರೋಡೆಕೋರರು ಸೋಮವಾರ ಬೆಳಗ್ಗೆ 9.45ರ ಸುಮಾರಿಗೆ ಈ ಹಣಕಾಸು ಸಂಸ್ಥೆಯನ್ನು ಹೊಕ್ಕಿದ್ದಾರೆ. ಆಗ ಅಲ್ಲಿದ್ದ ಐವರು ಉದ್ಯೋಗಿಗಳಿಗೂ ಗನ್ ತೋರಿಸಿ ಬೆದರಿಸಿದ್ದಾರೆ. ಆ ಸಮಯದಲ್ಲಿ ಯಾರೂ ಗ್ರಾಹಕರು ಇರಲಿಲ್ಲ. ಹಾಗೇ ಸೆಕ್ಯೂರಿಟಿ ಗಾರ್ಡ್ಗಳೂ ಇರಲಿಲ್ಲ ಎನ್ನಲಾಗಿದೆ.
ನಮ್ಮನ್ನು ಕ್ಯಾಬಿನ್ನಲ್ಲಿ ಕೂಡಿ ಹಾಕಿದ ದರೋಡೆಕೋರರು ನಾಲ್ಕು ಬ್ಯಾಗ್ಗಳಲ್ಲಿ ಚಿನ್ನ ತೆಗೆದುಕೊಂಡು ಹೋಗಿದ್ದಾರೆ ಎಂದು ಸಂಸ್ಥೆಯ ಬ್ರ್ಯಾಂಚ್ ಮ್ಯಾನೇಜರ್ ಹರ್ಪೀತ್ ಸಿಂಗ್ ತಿಳಿಸಿದ್ದಾರೆ.
ನಾನು ಎಂದಿನಂತೆ 10 ಗಂಟೆಗೆ ಬಂದೆ. ಹೊರಗಿನಿಂದ ಏನೂ ಗೊತ್ತಾಗುತ್ತಿರಲಿಲ್ಲ. ಒಳಗೆ ಬಂದ ತಕ್ಷಣೆ ನನ್ನ ಸಹೋದ್ಯೋಗಿಗಳತ್ತ ಗನ್ ಹಿಡಿದು ನಿಂತಿರುವ ಲೂಟಿಕೋರರು ಕಂಡರು ಎಂದು ಉದ್ಯೋಗಿಯೋರ್ವರು ತಿಳಿಸಿದ್ದಾರೆ. ಅವರು ನನ್ನ ಮೊಬೈಲ್ ಕಿತ್ತುಕೊಂಡರು. ನನಗೂ ಗನ್ ತೋರಿಸಿ ಕ್ಯಾಬಿನ್ನಲ್ಲಿ ಕೂಡಿ ಹಾಕಿದರು ಎಂದು ಹೇಳಿದ್ದಾರೆ.
ಈ ದರೋಡೆಕೋರರು ಹೋಗುವಾಗ ಕಚೇರಿಯ ಮುಖ್ಯಗೇಟ್ಗೆ ಬೀಗ ಹಾಕಿ ಹೋಗಿದ್ದರು. ಬಳಿಕ ಆ ಕಟ್ಟಡದ ಮಾಲೀಕನಿಗೆ ವಿಷಯ ತಿಳಿಸಿ, ಕೀ ತೆಗೆಸಲಾಯಿತು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)