

ದೆಹಲಿಯ ರೆಸ್ಟೋರಂಟ್ನಲ್ಲಿ ಆತ ಕೆಲಸ ಮಾಡಿಕೊಂಡಿದ್ದ. ದೇಶಾದ್ಯಂತ ಲಾಕ್ಡೌನ್ಗೂ ಮುನ್ನ ಹೋಟೆಲ್ಗಳನ್ನು ತೆರೆದಿರಲು ಅವಕಾಶವಿತ್ತು. ಆದರೆ, ಲೌಕ್ಡೌನ್ ಘೋಷಣೆ ಬಳಿಕ ಎಲ್ಲವನ್ನೂ ಮುಚ್ಚಲಾಯ್ತು. ಹೀಗಾಗಿ ದೆಹಲಿಯಿಂದ 300 ಕಿ.ಮೀ. ದೂರವಿದ್ದ ಮನೆಗೆ ನಡೆದುಕೊಂಡು ಹೋಗಲು ಆತ ನಿರ್ಧರಿಸಿದ. ಆದರೆ, 200 ಕಿ.ಮೀ. ದೂರ ಕ್ರಮಿಸುವಷ್ಟರಲ್ಲಿಯೇ ವಿಧಿ ಆತನನ್ನು ಸೆಳೆದುಕೊಂಡಿದೆ.
ರಣವೀರ್ಸಿಂಗ್ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಗ್ರಾಮದವನು. ದಕ್ಷಿಣ ದೆಹಲಿಯ ತುಘಲಕಾಬಾದ್ನಲ್ಲಿರುವ ರೆಸ್ಟೋರಂಟ್ನಲ್ಲಿ ಕೆಲಸಕ್ಕಿದ್ದ. ಲಾಕ್ಡೌನ್ ಘೋಷಿಸಿದ ಬಳಿಕ ಆತ ಕೆಲಸಕ್ಕಿದ್ದ ರೆಸ್ಟೋರಂಟ್ ಬಂದ್ ಮಾಡಲಾಯಿತು. ಇನ್ನಿಬ್ಬರು ಗೆಳೆಯರೊಂದಿಗೆ ಅಂದಾಜು 300 ಕಿ.ಮೀ. ದೂರದ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿಯೇ ಸಾಗಲು 38 ವರ್ಷದ ರಣವೀರ್ಸಿಂಗ್ ನಿರ್ಧರಿಸಿದ್ದ.
ದೆಹಲಿ- ಆಗ್ರಾ ಹೆದ್ದಾರಿಯಲ್ಲಿ ಸಾಗುತ್ತಿದ್ದ ಆತನಿಗೆ ಉತ್ತರಪ್ರದೇಶದ ಆಗ್ರಾ ಸಮೀಪಕ್ಕೆ ಬರುತ್ತಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಕುಸಿದು ಬಿದ್ದ ಸ್ಥಳದಲ್ಲಿಯೇ ಆತನ ಪ್ರಾಣಪಕ್ಷಿ ಹಾರಿ ಹೋಗಿದೆ.
ವಾಹನ ಸಂಚಾರ, ಗಡಿ ರಸ್ತೆಗಳ ಬಂದ್ ಬಳಿಕ ನಗರ ಪ್ರದೇಶಗಳಲ್ಲಿ ಲಕ್ಷಾಂತರ ಜನರು ಸಿಲುಕಿದ್ದಾರೆ. ಈ ಪೈಕಿ ಸಾವಿರಾರು ಜನರು ಕಾಲ್ನಡಿಗೆಯಲ್ಲಿಯೇ ತಮ್ಮ ಊರುಗಳತ್ತ ಸಾಗುತ್ತಿದ್ದಾರೆ. ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಮರಳಿ ತಮ್ಮೂರಿಗೆ ಗುಳೆಹೋಗುತ್ತಿರುವ ಜನರ ಪೈಕಿ ಮೊದಲ ಸಾವಿನ ಪ್ರಕರಣ ಇದಾಗಿದೆ ಎಂದು ಹೇಳಲಾಗಿದೆ.