

| ಜಿ.ಟಿ. ಹೆಗಡೆ ಹುಬ್ಬಳ್ಳಿ
ರಾಜ್ಯ ಸರ್ಕಾರವು ಅನ್ನದಾತರಿಗೆ ಈ ಸಾಲಿನಲ್ಲಿ ನೀಡಬೇಕಿದ್ದ ಅಂದಾಜು 3000 ಕೋಟಿ ರೂ.ಗಳನ್ನು ಬಾಕಿ ಇರಿಸಿಕೊಂಡಿದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪಿಎಂ ಕಿಸಾನ್ ಸಮ್ಮಾನ ಯೋಜನೆ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ ವಾರ್ಷಿಕವಾಗಿ ತಲಾ 4 ಸಾವಿರ ರೂ. ನೆರವು ನೀಡಿದ್ದರು. ಆದರೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರ ಈ ಯೋಜನೆಯ ಹಣವನ್ನು ರೈತರಿಗೆ ಇದುವರೆಗೂ ನೀಡಿಲ್ಲ.
ಕೇಂದ್ರ ಸರ್ಕಾರ ನೀಡುವ ವಾರ್ಷಿಕ 6000 ರೂ. ಜತೆಗೆ ರಾಜ್ಯವು 4000 ರೂ. ಕೊಡಲು 2000 ಕೋಟಿ ರೂ. ಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಅಂತೆಯೇ, ಬಿಎಸ್ವೈ ಸೂಚನೆ ಮೇರೆಗೆ ಕೃಷಿ ಇಲಾಖೆಯ ಸಾದಿಲ್ವಾರು ಮೊತ್ತ 80 ಕೋಟಿ ರೂ. ಇದ್ದುದನ್ನು 2019ರ ಆಗಸ್ಟ್ನಲ್ಲಿ ದಿಢೀರ್ 2200 ಕೋಟಿ ರೂ.ಗೆ ಹೆಚ್ಚಿಸಿ ಆರ್ಥಿಕ ಇಲಾಖೆ ಬಿಡುಗಡೆ ಮಾಡಿತ್ತು. ತಾಂತ್ರಿಕ ಸಮಸ್ಯೆ ಇರುವ ಕೆಲ ಪ್ರಕರಣ ಬಿಟ್ಟರೆ, ಬಹುತೇಕ ಎಲ್ಲ ರೈತರ ಖಾತೆಗೆ ಆ ಸಾಲಿನಲ್ಲಿ ರಾಜ್ಯದ ಹಣ ಜಮಾ ಆಗಿತ್ತು. ಆದರೆ, ನಂತರ 2020-2021ರಲ್ಲಿ ಆರ್ಥಿಕ ಕಾರಣದಿಂದಾಗಿ ಈ ಯೋಜನೆಗೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಪ್ರತಿ ಆರು ತಿಂಗಳಿಗೊಮ್ಮೆ ರೈತರಿಗೆ ತಲಾ 2000 ರೂ.ನಂತೆ ಪಾವತಿಸಬೇಕು. ಈಗ ರೈತರಿಗೆ ಮೂರು ಕಂತಿನ ಬಾಕಿ ಇದೆ. ಪ್ರತಿ ರೈತರಿಗೆ 6000 ರೂ. ನೀಡಬೇಕಾಗಿದ್ದು, ಈ ಒಟ್ಟು ಮೊತ್ತವು ಅಂದಾಜು 3000 ಕೋಟಿ ರೂ. ಆಗಿದೆ.
ಅನರ್ಹರು ಹೊರಗೆ: ರಾಜ್ಯದಲ್ಲಿ ಪಿಎಂ ಕಿಸಾನ್ ಯೋಜನೆಯಲ್ಲಿ 54 ಲಕ್ಷ ಫಲಾನುಭವಿಗಳಿದ್ದರು. ಆದಾಯ ತೆರಿಗೆ ಪಾವತಿದಾರರು ಸೇರಿ ಅನರ್ಹರನ್ನು ಗುರುತಿಸಿ ಯಾದಿಯಿಂದ ತೆಗೆಯಲಾಗುತ್ತಿದ್ದು, ಸದ್ಯ 48 ಲಕ್ಷದಷ್ಟು ಫಲಾನುಭವಿಗಳಿದ್ದಾರೆ. ಇವರಿಗೆ ಪ್ರತಿ ಕಂತಿಗೆ 2000 ರೂ. ಜಮಾ ಮಾಡಲು ರಾಜ್ಯ ಸರ್ಕಾರಕ್ಕೆ 1000 ಕೋಟಿ ರೂ. ಬೇಕು. ಈ ತಿಂಗಳಾಂತ್ಯಕ್ಕೆ 3 ಕಂತು ಬಾಕಿಯಾಗುತ್ತದೆ.
ನಮ್ಮ ಇಲಾಖೆಯಿಂದ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಹೋಗಿದ್ದು, ಮಂಜೂರು ಹಂತದಲ್ಲಿದೆ. ಅಂದಾಜು 48 ಲಕ್ಷ ಫಲಾನುಭವಿಗಳಿದ್ದಾರೆ. ಹಂತ-ಹಂತವಾಗಿ ಎಲ್ಲ ಅರ್ಹ ರೈತರ ಖಾತೆಗೆ ಹಣ ಜಮಾ ಆಗಲಿದೆ.
| ನಂದಿನಿಕುಮಾರಿ ಕೃಷಿ ಇಲಾಖೆ ನಿರ್ದೇಶಕರು