

ಬೆಂಗಳೂರು: ಕರೊನಾ 2ನೇ ಅಲೆ ತಡೆಗಾಗಿ ಜಾರಿಗೊಳಿಸಲಾಗಿರುವ 14 ದಿನಗಳ ಜನತಾ ಕರ್ಫ್ಯೂಗೆ ಹೆದರಿ ನಗರಪ್ರದೇಶಗಳ ಲಕ್ಷಾಂತರ ಜನ ಹಳ್ಳಿ ಸೇರಿದ ಬೆನ್ನಲ್ಲೇ ಬೆಂಗಳೂರಿನ 3 ಸಾವಿರ ಸೋಂಕಿತರ ಮೊಬೈಲ್ ನಂಬರ್ ನಾಟ್ ರೀಚಬಲ್ ಆಗಿರುವುದು ಸರ್ಕಾರಕ್ಕೆ ಹೊಸ ತಲೆನೋವು ತಂದಿಟ್ಟಿದೆ.
ಹೀಗೆ ನಾಪತ್ತೆಯಾದವರು ಕರೊನಾ ಮಾರಿಯನ್ನು ಬೆನ್ನಿಗಂಟಿಸಿಕೊಂಡೇ ಸ್ವಗ್ರಾಮಗಳಿಗೆ ತೆರಳಿರಬಹುದಾದ ಸಾಧ್ಯತೆ ದಟ್ಟವಾಗಿರುವುದರಿಂದ ಹಳ್ಳಿ ಹಳ್ಳಿಗಳಲ್ಲೂ ಸೋಂಕು ತಾಂಡವವಾಡುವ ಆತಂಕ ಇಮ್ಮಡಿಗೊಂಡಿದೆ. ಈ ಸ್ಥಿತಿಗೆ ಪೂರಕವಾಗಿ ಬುಧವಾರ ಒಂದೇ ದಿನ ರಾಜ್ಯದಲ್ಲಿ 39000 ಕೇಸ್ ಬೆಳಕಿಗೆ ಬಂದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.
ಈ ನಡುವೆ ಹೊರಗಿನಿಂದ ಬಂದವರನ್ನು ಪತ್ತೆ ಹಚ್ಚಿ ಪರೀಕ್ಷೆಗೊಳಪಡಿಸುವ ಹೊಣೆಗಾರಿಕೆಯನ್ನು ಸರ್ಕಾರ ಜಿಲ್ಲಾಡಳಿತಗಳ ಹೆಗಲೇರಿಸಿದೆ. ಜನತಾ ಕರ್ಫ್ಯೂ ಜಾರಿಗೆ ಬಳಿಕ ಬೆಂಗಳೂರಿನಿಂದಲೇ 3 ಲಕ್ಷಕ್ಕೂ ಹೆಚ್ಚು ಜನರು ಸ್ವಗ್ರಾಮಕ್ಕೆ ವಾಪಸಾಗಿರುವ ಅಂದಾಜಿದೆ. ಇನ್ನೊಂದೆಡೆ ಮಹಾರಾಷ್ಟ್ರದ ಮುಂಬೈ, ಪುಣೆ, ರತ್ನಗಿರಿ, ಸೋಲಾಪುರ ಇನ್ನಿತರ ನಗರಗಳಿಗೆ ಹೋದವರೂ ಸ್ವಗ್ರಾಮಗಳಿಗೆ ಹಿಂದಿರುಗಿದ್ದಾರೆ.
ಇದೆಲ್ಲದರ ಮಧ್ಯೆ ಸೋಂಕು ಹರಡುವಿಕೆ ತೀವ್ರತೆ ಹೆಚ್ಚ್ಚಾಗಿದ್ದು, ಯುವಕರು ಸೇರಿ ಎಲ್ಲ ವಯಸ್ಸಿನವರ ಜೀವ ಪಡೆಯುತ್ತಿದೆ. ಬೆಂಗಳೂರಲ್ಲಿ ಪ್ರತಿನಿತ್ಯ 20 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದು, ನಿಯಂತ್ರಣಕ್ಕೆ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ 3 ಸಾವಿರಕ್ಕೂ ಅಧಿಕ ಮಂದಿ, ಸೋಂಕು ದೃಢಪಟ್ಟಿದ್ದರೂ ತಮ್ಮ ಫೋನ್ಗಳನ್ನು ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.
ಮನೆ ಮನೆ ಶೋಧ: ಮೊಬೈಲ್ ಆಫ್ ಮಾಡಿಕೊಂಡಿರುವವರ ಬೆನ್ನತ್ತಿ ಬಿಬಿಎಂಪಿ ಸಿಬ್ಬಂದಿ ಪರಿಶೀಲನೆಗೆ ಹೋದಾಗ ಅನೇಕರು ಮನೆ ಖಾಲಿ ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಆದರೆ ಅವರೆಲ್ಲ ಈಗ ಎಲ್ಲಿದ್ದಾರೆ? ಹೇಗಿದ್ದಾರೆ? ಯಾರ ಸಂಪರ್ಕಕ್ಕೆ ಬಂದಿದ್ದಾರೆ? ಎಷ್ಟು ಜನರಿಗೆ ಸೋಂಕು ಹರಡಿಸಲು ಕಾರಣವಾಗಿದ್ದಾರೆ? ಎಂಬ ಮಾಹಿತಿ ಸಿಗುತ್ತಿಲ್ಲ.