ಜಿಎಸ್​ಟಿ ಗ್ರಾಹಕರಿಂದ 3,000 ದೂರು

GST
Published on

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸ್ಲ್ಯಾಬ್​ಗಳನ್ನು ಕಡಿಮೆ ಮಾಡಿದರೂ ಅದರ ಲಾಭವನ್ನು ಗ್ರಾಹಕರಿಗೆ ತಲುಪಿಸಲು ಕೆಲವು ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಮುಂದಾಗದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ (ನ್ಯಾಷನಲ್ ಕನ್ಸೂಮರ್ಸ್ ಹೆಲ್ಪ್​ಲೈನ್- ಎನ್​ಸಿಎಚ್) ಸುಮಾರು 3,000 ದೂರುಗಳು ಸಲ್ಲಿಕೆಯಾಗಿವೆ.

‘ಪ್ರತಿದಿನ, ದೂರುಗಳು ಬರುತ್ತಿದ್ದು ಅವುಗಳನ್ನು ಮುಂದಿನ ಕ್ರಮಕ್ಕಾಗಿ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಗೆ (ಸಿಬಿಐಸಿ) ಕಳುಹಿಸುತ್ತಿದ್ದೇವೆ’ ಎಂದು ಗ್ರಾಹಕ ವ್ಯವಹಾರ ಕಾರ್ಯದರ್ಶಿ ನಿಧಿ ಖರೆ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಜಿಎಸ್​ಟಿ ದರ ಇಳಿಕೆಯ ಲಾಭವನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸದೇ, ರಿಯಾಯಿತಿ ನೀಡಿಕೆ ಮತ್ತಿತರ ತಪ್ಪುದಾರಿಗೆಳೆಯುವ ಮಾರ್ಗಗಳನ್ನು ಕೆಲವು ಮಳಿಗೆಗಳು ಮಾಡುತ್ತಿವೆ. ಇದನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಗಮನವಿಟ್ಟು ಪರಿಶೀಲಿಸುತ್ತಿದೆ. ವಿವಿಧ ವಲಯಗಳ ದೂರುಗಳ ಸ್ಪಷ್ಟ ಚಿತ್ರಣ ಪಡೆಯಲು ಕೃತಕ ಬುದ್ಧಿಮತ್ತೆ ಮತ್ತು ಚಾಟ್​ಬಾಟ್ ತಂತ್ರಜ್ಞಾನವನ್ನು ಬಳಸುತ್ತಿದೆ. ತಪ್ಪುದಾರಿಗೆಳೆಯುವ ಜಾಹೀರಾತುಗಳು, ಡಾರ್ಕ್ ಪ್ಯಾಟರ್ನ್​ಗಳ ಬಳಕೆ, ಅನ್ಯಾಯದ ವ್ಯಾಪಾರ ಕ್ರಮಗಳನ್ನು ಕೆಲವು ವ್ಯಾಪಾರಸ್ಥರು ಅನುಸರಿಸುತ್ತಿರುವುದರ ಬಗ್ಗೆ ಸಚಿವಾಲಯ ಪರಿಶೀಲಿಸುತ್ತಿದೆ. ಗ್ರಾಹಕರಿಗೆ ಮೋಸವಾಗಲು ಬಿಡುವುದಿಲ್ಲ ಎಂದು ಖರೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net