30 ಸಾವಿರ ಕೋಟಿ ರೂ. ಆಸ್ತಿ ವಿವಾದ; ಸಂಜಯ್ ಕಪೂರ್​ ಹೆಸರಲ್ಲಿ ನಕಲಿ ವಿಲ್ ಸೃಷ್ಟಿ ಆರೋಪ; ಹೈಕೋರ್ಟ್​ ಮೆಟ್ಟಿಲೇರಿದ ಕರೀಷ್ಮಾ ಮಕ್ಕಳು| Sanjay Kapoor Assets

Sanjay Kapoor
Published on

Sanjay Kapoor Assets: ಭಾರತೀಯ ಉದ್ಯಮಿ ಸಂಜಯ್ ಕಪೂರ್ ನಿಧನ ಬಳಿಕ ಕಪೂರ್ ಕುಟುಂಬದಲ್ಲಿ 30 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಬಗ್ಗೆ ವಿವಾದ ಹುಟ್ಟಿಕೊಂಡಿದೆ. ಸಂಜಯ್ ಮಾಜಿ ಪತ್ನಿ ಕರೀಷ್ಮಾ ಕಪೂರ್ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಆಸ್ತಿಯಲ್ಲಿ ಪಾಲು ಕೇಳಿ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದು, ಮಲತಾಯಿ ಪ್ರಿಯಾ ಸಚ್ಚದೇವ್ ವಿರುದ್ಧ ನಕಲಿ ವಿಲ್ ಸೃಷ್ಟಿಸಿದ ಆರೋಪ ಮಾಡಿದ್ದಾರೆ.

ಕರೀಷ್ಮಾ ಕಪೂರ್ ಮಕ್ಕಳು ಸಲ್ಲಿಸಿದ ಅರ್ಜಿಯಲ್ಲಿ,  ಈ ವಿಲ್ ಕಟ್ಟುಕಥೆಯಾಗಿದ್ದು, ತಮ್ಮ ಮಲತಾಯಿ ಪ್ರಿಯಾ ಸಚ್‌ದೇವ್ ಅವರು ಸಂಜಯ್ ಅವರ ಹೆಸರಿನಲ್ಲಿ ವಿಲ್ ಅನ್ನು ನಕಲಿ ತಯಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ತಂದೆಯಿಂದ ಮಾಡಲ್ಪಟ್ಟಿದೆ ಎನ್ನಲಾದ ನಕಲಿ ವಿಲ್ ಕಾನೂನು ಬದ್ಧವಲ್ಲ. ಹೀಗಾಗಿ ವಿಲ್​ನಿಂದ ತಪ್ಪಾಗಿ ತಮ್ಮ ಹೆಸರನ್ನು ಹೊರಗಿಡಲಾಗಿದೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಮೃತ ಸಂಜಯ್ ಮೂರನೇ ಪತ್ನಿ ಪ್ರಿಯಾ ಕಪೂರ್, ಅವರ ಅಪ್ರಾಪ್ತ ಮಗ, ಸಂಜಯ್ ಅವರ ತಾಯಿ ರಾಣಿ ಕಪೂರ್ ಮತ್ತು ವಿಲ್‌ನ ಕಾರ್ಯನಿರ್ವಾಹಕ ಎಂದು ಹೇಳಲಾಗುವ ಶ್ರದ್ಧಾ ಸೂರಿ ಮಾರ್ವಾ ಅವರನ್ನು ಪ್ರತಿವಾದಿಗಳಾಗಿ ಮಾಡಿದ್ದಾರೆ.

ಇಂದು (ಸೆ. 10) ಕಪೂರ್ ಮಕ್ಕಳ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​, ಕಪೂರ್ ಅವರ ಮೂರನೇ ಪತ್ನಿ ಮತ್ತು ಪ್ರಕರಣದ ಪ್ರಮುಖ ಆರೋಪಿ ಪ್ರಿಯಾ ಸಚ್‌ದೇವ ಕಪೂರ್ ಅವರಿಗೆ ಸುಂಜಯ್ ಕಪೂರ್ ಅವರ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಗಳ ಪಟ್ಟಿಯನ್ನು ಸಲ್ಲಿಸುವಂತೆ ಆದೇಶಿಸಿತು.

ನೋಟಿಸ್ ಜಾರಿ ಮಾಡಿದ ಎರಡು ವಾರಗಳಲ್ಲಿ ಉತ್ತರಿಸಿ, ಬಳಿಕ ಒಂದು ವಾರದಲ್ಲಿ ಮರುಪ್ರಕಟಿಸಿ. ಪ್ರತ್ಯುತ್ತರಗಳ ಜೊತೆಗೆ ಪ್ರತಿವಾದಿ 1 ಪ್ರತಿವಾದಿ 1 ಗೆ ತಿಳಿದಿರುವ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಗಳ ಪಟ್ಟಿಯನ್ನು ಸಲ್ಲಿಸಬೇಕು. ಜೂನ್ 12ರವರೆಗಿನ ಆಸ್ತಿಗಳನ್ನು ಘೋಷಿಸಬೇಕು ಎಂದು ಸೂಚಿಸಿ, ಅಕ್ಟೋಬರ್ 9ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಸಂಜಯ್ ಕಪೂರ್ ತಾಯಿಯಿಂದಲೂ ಆರೋಪ

ದಿವಂಗತ ಸಂಜಯ್‌ ತಾಯಿ ರಾಣಿ ಕಪೂರ್, ತಮ್ಮ ಮಗನ ಮರಣದ ಶೋಕಾವಸ್ಥೆಯಲ್ಲಿದ್ದಾಗ ಕೆಲವು ಕಾಗದಗಳಿಗೆ ಸಹಿ ಮಾಡಲು ನನಗೆ ಒತ್ತಾಯಿಸಲಾಗಿತ್ತು ಎಂದು ಆರೋಪಿಸಿದ್ದಾರೆ. ಆ ಕಾಗದಗಳು ಯಾವುವು ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಅದೇ ರೀತಿಯಲ್ಲಿ ಸಂಜಯ್‌ರವರ ಸಹೋದರಿ ಮಂದಿರಾ ಕಪೂರ್ ಕೂಡ ಈ ಆರೋಪವನ್ನು ಬೆಂಬಲಿಸಿದ್ದು, ಶೋಕದ ಅವಧಿಯಲ್ಲಿ ಮನೆಯ ಬಾಗಿಲನ್ನು ಲಾಕ್ ಮಾಡಿ ತಾಯಿಯಿಂದ ಕಾಗದಗಳಿಗೆ ಸಹಿ ಮಾಡಿಸಿಕೊಳ್ಳಲಾಗಿದೆ. ಎರಡ್ಮೂರು ಬಾರಿ ಈ ರೀತಿ ಸಹಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಆಸ್ತಿ ಜಗಳದಲ್ಲಿ ನಟಿ ಕರೀಷ್ಮಾ ಕಪೂರ್ ಹೆಸರು ಕೇಳಿ ಬಂದಾಗ, ಆಪ್ತರೊಬ್ಬರು "ಕರಿಷ್ಮಾ ಕಪೂರ್ ಯಾವುದೇ ಪಿತ್ರಾರ್ಜಿತ ಅಥವಾ ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಭಾಗಿಯಾಗಿಲ್ಲ. ಅವರಿಗೆ ಯಾವುದೇ ಹಕ್ಕು ಇಲ್ಲ, ಅಥವಾ ಅವರು ಆಸ್ತಿಯಲ್ಲಿ ಯಾವುದೇ ಪಾಲನ್ನು ಬಯಸುತ್ತಿಲ್ಲ. ಅವರ ಏಕೈಕ ಕಾಳಜಿ ಅವರ ಮಕ್ಕಳ ಯೋಗಕ್ಷೇಮ ಮತ್ತು ಭವಿಷ್ಯವಾಗಿದೆ ಎಂದು ಹೇಳಿದ್ದರು.

ಕರಿಷ್ಮಾ ಕಪೂರ್ 2003 ರಲ್ಲಿ ದೆಹಲಿ ಮೂಲದ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾಗಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದರು. ಆದಾಗ್ಯೂ, ವರ್ಷಗಳ ಪ್ರಕ್ಷುಬ್ಧತೆಯ ನಂತರ, ದಂಪತಿಗಳು ಬೇರ್ಪಟ್ಟು, 2016 ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಇದೇ ವರ್ಷ ಜೂನ್ 12ರಂದು ಲಂಡನ್​ನಲ್ಲಿ ಪೋಲೋ ಆಡುವಾಗ ಸಂಜನ್ ಹೃದಯಾಘಾತದಿಂದ ನಿಧನರಾಗಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net