

ನವದೆಹಲಿ: ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಆಡಳಿತ ನಿರ್ದೇಶಕ ಮತ್ತು ಸಿಇಒ ವಿ. ವೈದ್ಯನಾಥನ್ ತಮ್ಮ ಮಾಜಿ ಶಿಕ್ಷಕಿಗೆ 30 ಲಕ್ಷ ರೂಪಾಯಿ ಮೌಲ್ಯದ ಷೇರುಗಳನ್ನು ನೀಡಿದ್ದಾರೆ. ಬಾಲ್ಯದಲ್ಲಿ ನೆರವಾದ ಶಿಕ್ಷಕಿ ಗುರುದಯಾಳ್ ಸರೂಪ್ ಸೈನಿ ಅವರಿಗೆ ವೈದ್ಯನಾಥನ್ ಕೃತಜ್ಞತಾಪೂರ್ವಕವಾಗಿ ಒಂದು ಲಕ್ಷ ಷೇರುಗಳನ್ನು ವರ್ಗಾಯಿಸಿದ್ದಾರೆ.
ಅವರ ತೆರಿಗೆಗಳನ್ನೂ ತಾವೇ ಕಟ್ಟುವುದಾಗಿ ವೈದ್ಯನಾಥನ್ ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕ ಪಾಲಿನ ಷೇರುಗಳಲ್ಲಿ ಒಂದು ಲಕ್ಷ ಷೇರುಗಳನ್ನು ವೈದ್ಯನಾಥನ್ ಕೊಡುಗೆಯಾಗಿ ಕೊಟ್ಟಿದ್ದಾರೆ ಎಂದು ಬ್ಯಾಂಕ್ ವಿವರಿಸಿದೆ. ವೈದ್ಯನಾಥನ್ ಬ್ಯಾಂಕೇತರ ಹಣಕಾಸು ಸಂಸ್ಥೆ ಕ್ಯಾಪಿಟಲ್ ಫಸ್ಟ್ನ ಸಂಸ್ಥಾಪಕರು. 2018 ಡಿಸೆಂಬರ್ನಲ್ಲಿ ಅದು ಐಡಿಎಫ್ಸಿ ಬ್ಯಾಂಕ್ನೊಂದಿಗೆ ವಿಲೀನವಾಗಿ ಐಡಿಎಫ್ಸಿ ಫಸ್ಟ್ ಬ್ಯಾಂಕ್ ರಚನೆಯಾಗಿತ್ತು. 2018ರಲ್ಲಿ, ಕ್ಯಾಪಿಟಲ್ ಫಸ್ಟ್ನ ಅಧ್ಯಕ್ಷರಾಗಿದ್ದಾಗ ವೈದ್ಯನಾಥನ್ 20 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಷೇರುಗಳನ್ನು ತಮ್ಮ ಚಾಲಕರು, ಮೂವರು ಮನೆಕೆಲಸದವರು, ಕೆಲವು ಸಹೋದ್ಯೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ಕೊಡುಗೆಯಾಗಿ ನೀಡಿದ್ದರು.