

ತಿರುವನಂತಪುರ: ಇಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 15 ಕೋಟಿ ರೂಪಾಯಿ ಮೌಲ್ಯದ 30 ಕೆ.ಜಿ. ಚಿನ್ನವು ಪತ್ತೆಯಾಗಿದೆ!
ರಾಜತಾಂತ್ರಿಕ ರಕ್ಷಣೆ ಹೊಂದಿರುವ ‘ಡಿಪ್ಲೊಮ್ಯಾಟಿಕ್ ಬ್ಯಾಗೇಜ್’ನಲ್ಲಿ ಈ ಚಿನ್ನ ಸಿಕ್ಕಿದೆ. ಇದನ್ನು ಕಸ್ಟಮ್ಸ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಇಷ್ಟೊಂದು ಭಾರಿ ಪ್ರಮಾಣದ ಚಿನ್ನ ಇಲ್ಲಿಗೆ ಹೇಗೆ ಬಂತು? ಅದೂ ರಾಜತಾಂತ್ರಿಕ ರಕ್ಷಣೆ ಹೊಂದಿರುವ ಡಿಪ್ಲೊಮ್ಯಾಟಿಕ್ ಬ್ಯಾಗೇಜ್‌ನಲ್ಲಿ ಇದು ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದರೊಂದಿಗೆ ರಾಜತಾಂತ್ರಿಕ ರಕ್ಷಣೆ ಹೊಂದಿರುವ ವ್ಯಕ್ತಿಗಳ ಹೆಸರಿನಲ್ಲಿ ಚಿನ್ನ ಕಳ್ಳಸಾಗಣೆ ನಡೆಯುತ್ತಿರಬಹುದು ಎಂಬ ಗುಮಾನಿಯೂ ವ್ಯಕ್ತವಾಗಿದೆ.
ಈ ಬ್ಯಾಗಿನಲ್ಲಿದ್ದ ಸ್ನಾನಗೃಹದ ಉಪಕರಣಗಳ ಒಳಗೆ ಚಿನ್ನವನ್ನು ಅಡಗಿಸಿಡಲಾಗಿತ್ತು. ಈ ಬ್ಯಾಗ್ ಎರಡು ದಿನದ ಹಿಂದೆ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಇದೊಂದು ಡಿಪ್ಲೋಮಾಟಿಕ್ ಬ್ಯಾಗೇಜ್ ಆಗಿದ್ದರಿಂದ ಹೆಚ್ಚಿನ ತಪಾಸಣೆಗೆ ಒಳಗಾಗಿರಲಿಲ್ಲ.
ಆದರೆ ಇದನ್ನು ಕೇಳಿಕೊಂಡು ಯಾರೂ ಬಂದಿರದ ಹಿನ್ನೆಲೆಯಲ್ಲಿ, ತಪಾಸಣೆ ಕೈಗೊಂಡಾಗ ಚಿನ್ನ ಪತ್ತೆಯಾಗಿದೆ ಎಂದು ಕಸ್ಟಮ್ಸ್ ಆಯುಕ್ತ ಸುಮೀತ್ ಕುಮಾರ್ ತಿಳಿಸಿದ್ದಾರೆ. ತಿರುವನಂತಪುರದ ಸಂಯುಕ್ತ ಅರಬ್ ಸಂಸ್ಥಾನದ ದೂತಾವಾಸ ವಿಳಾಸವನ್ನು ಈ ಬ್ಯಾಗ್ ಹೊಂದಿದೆ ಎನ್ನಲಾಗಿದೆ.
ತಿರುವನಂತಪುರದ ಮನ್ಸಾಡ್‌ನಲ್ಲಿ ಇರುವ ಅರಬ್ ಸಂಯುಕ್ತ ಸಂಸ್ಥಾನದ ವಿಳಾಸಕ್ಕೆ ಈ ಬ್ಯಾಗ್ ಅನ್ನು ಕಳುಹಿಸಲಾಗಿತ್ತು. (ಏಜೆನ್ಸೀಸ್)