3ನೇ ಅಲೆಗೂ ಮುನ್ನ ಮುನ್ನೆಚ್ಚರಿಕೆ ವಹಿಸಿ: ಮೂಲಸೌಲಭ್ಯ ಕಲ್ಪಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್ ಸೂಚನೆ

23-klr-6
Published on

ಕೋಲಾರ : ಕರೊನಾ 3ನೇ ಅಲೆ ಕಾಣಿಸಿಕೊಂಡರೆ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆ ಹಾಗೂ ಕ್ರಮ ಕೈಗೊಂಡು ರಾಜ್ಯಕ್ಕೇ ಜಿಲ್ಲೆ ಮಾದರಿಯನ್ನಾಗಿಸಿ, ಶಾಲೆ, ಅಂಗನವಾಡಿಗಳಿಗೆ ಮೂಲಸೌಲಭ್ಯ ಕಲ್ಪಿಸುವುದು ಆದ್ಯತೆಯಾಗಿ ತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಅಲೆಯಲ್ಲಿ 185 ಮಂದಿ ಮೃತಪಟ್ಟರೆ 2ನೇ ಅಲೆಯಲ್ಲಿ ಈವರೆಗೆ 365 ಸಾವು ಸಂಭವಿಸಿದೆ. 3ನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾಗುವ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೋವಿಡ್ ಕೇರ್ ಸೆಂಟರ್, ಮಕ್ಕಳ ತಜ್ಞರು, ಆಕ್ಸಿಜನ್ ಸೇರಿ ಯಾವುದೇ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಬೇಕು ಎಂದರು.

ಕರೊನಾದಿಂದ ಮಗು ಆಸ್ಪತ್ರೆ ಇಲ್ಲವೆ ಕಾಳಜಿ ಕೇಂದ್ರಕ್ಕೆ ದಾಖಲಾದರೆ ತಾಯಿಯೂ ಅಲ್ಲೇ ಇರುವುದರಿಂದ ಇಬ್ಬರಿಗೂ ಪಿಪಿಇ ಕಿಟ್ ನೀಡಬೇಕು. ಪ್ರತಿ ತಾಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ಸಿದ್ಧವಿರಲಿ. ಆಕ್ಸಿಜನ್ ಬೆಡ್ ಹೆಚ್ಚಿಸಬೇಕು. ಒಟ್ಟಾರೆ ಎಲ್ಲ ತಯಾರಿ ಮಾಡಿಕೊಂಡಿರಿ, ಪರಿಸ್ಥಿತಿ ಯಾವಾಗ ಹೇಗೆ ಬೇಕಾದರೂ ಬದಲಾಗಬಹುದು ಎಂದು ಎಚ್ಚರಿಕೆ ನೀಡಿದರು.

ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿರುವ ಮಕ್ಕಳ ಬಗ್ಗೆ ಗಮನಹರಿಸಬೇಕು. ಪ್ರತಿ ಮಕ್ಕಳನ್ನು ತಪಾಸಣೆಗೆ ಒಳಪಡಿಸಬೇಕು. ಜಿಲ್ಲೆಗೆ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ಸರಬರಾಜಿಗೆ ಕ್ರಮ ವಹಿಸುವುದಾಗಿ ನುಡಿದರು.

ಅಂಗನವಾಡಿ ಕೇಂದ್ರಗಳಿಗೆ ವಿದ್ಯುದೀಕರಣ, ಫ್ಯಾನ್ ಇನ್ನಿತರ ಮೂಲಸೌಲಭ್ಯ ಕಲ್ಪಿಸುವಂತೆ ಹೈಕೋರ್ಟ್ ಸೂಚಿಸಿದೆ. ಎಲ್ಲೆಲ್ಲಿ ಸ್ವಂತ ನಿವೇಶನ ಇಲ್ಲವೋ ಅಂತಹ ಕಡೆ ಜಾಗ ಗುರುತಿಸಿ ಶೇ.100 ಗುರಿ ಸಾಧಿಸಬೇಕು, ಇಲ್ಲದಿದ್ದಲ್ಲಿ ನಾನು ಬಿಡಲ್ಲ. ಮಕ್ಕಳು ಶಾಲೆಗೆ ಬರುವ ಮುನ್ನ ಅಂಗನವಾಡಿಗೆ ಬಂದೇ ಬರುತ್ತಾರೆ, ಸಮಾಜದಲ್ಲಿ ಹೊಸ ಬದಲಾವಣೆ ತರುವಲ್ಲಿ ನಮಗೆ ಸಿಕ್ಕಿರುವ ಅವಕಾಶ ಇದಾಗಿದೆ ಎಂದರು.

ಒಂದೂವರೆ ವರ್ಷಗಳಿಂದ ಶಾಲೆಗಳು ಮುಚ್ಚಿದೆ. ಮುಂದೆ ಶಾಲೆ, ಅಂಗನವಾಡಿ ತೆರೆದಾಗ ಮನೆಯ ವಾತಾವರಣದಲ್ಲಿ ಮಕ್ಕಳನ್ನು ಸ್ವಾಗತಿಸುವ ನಿಟ್ಟಿನಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ಅಧಿಕಾರಿಗಳು ಪ್ರತಿ ಶಾಲೆ-ಅಂಗನನಾಡಿಗಳಿಗೆ ಭೇಟಿ ನೀಡಿ ಪರಿಸ್ಥಿತಿ ತಿಳಿದುಕೊಳ್ಳಬೇಕು. ಕೋವಿಡ್ ಕಾರ್ಯದಂತೆ ಸೌಲಭ್ಯ ಕಲ್ಪಿಸುವ ಕೆಲಸವಾಗಬೇಕು ಎಂದರು.

ಡಿಸಿ ಡಾ.ಆರ್.ಸೆಲ್ವಮಣಿ ಮಾತನಾಡಿ, ನರಸಾಪುರ, ವೇಮಗಲ್‌ನ ಕೆಲ ಕೈಗಾರಿಕೆಗಳಿಂದ ಲಸಿಕೆಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ದಿನಕ್ಕೆ ಕನಿಷ್ಠ 10,000 ಲಸಿಕೆ ಬೇಕು ಎಂದು ಬೇಡಿಕೆ ಇಟ್ಟರು. ಡಿಎಚ್‌ಒ ಡಾ.ಜಗದೀಶ್ ಮಾತನಾಡಿ, 3ನೇ ಅಲೆ ಸಂಬಂಧ ತಯಾರಿ ಮಾಡಿಕೊಳ್ಳಲಾಗುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿ 50 ಆಕ್ಸಿಜನ್ ಬೆಡ್‌ಗಳಿದ್ದು, ಹೆಚ್ಚುವರಿ 25 ಬೆಡ್ ವ್ಯವಸ್ಥೆ ಜತೆಗೆ 10 ಐಸಿಯು ಬೆಡ್ ಕಲ್ಪಿಸಲಾಗುವುದು. ಆಕ್ಸಿಜನ್ ಸಾಂದ್ರಕಗಳನ್ನು ಸಮುದಾಯ ಆರೋಗ್ಯ ಕೇಂದ್ರ, ಕಾಳಜಿ ಕೇಂದ್ರಗಳಿಗೂ ನೀಡಲಾಗುವುದು. 35 ಖಾಸಗಿ ಆಸ್ಪತ್ರೆಗಳಲ್ಲಿ 1270 ಬೆಡ್‌ಗಳಿದ್ದು, 524 ಹಾಸಿಗೆಗಳನ್ನು ಕೋವಿಡ್‌ಗೆ ಮೀಸಲಿರಿಸಲಾಗಿದೆ. ಒಟ್ಟು 43 ಮಕ್ಕಳ ವೈದ್ಯರಿದ್ದು, ತಜ್ಞರು, ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದರು.

ಜಿಪಂ ಸಿಇಒ ಎನ್.ಎಂ.ನಾಗರಾಜ್, ಕೋಲಾರ ಎಸ್ಪಿ ಡಿ.ಕಿಶೋರ್‌ಬಾಬು, ಕೆಜಿಎಫ್ ಎಸ್ಪಿ ಇಲಾಕಿಯಾ ಕರುಣಾಕರಣ್, ಜಿಪಂ ಉಪಕಾರ್ಯದರ್ಶಿ ಕೆ.ಪಿ ಸಂಜೀವಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು

ಹೆಲ್ತ್‌ಕಾರ್ಡ್‌ಗೆ ವಿಶೇಷ ಡ್ರೈವ್ : ರಾಜ್ಯದಾದ್ಯಂತ ಆಯುಸ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್‌ಕಾರ್ಡ್ ಪ್ರತಿಯೊಬ್ಬರಿಗೂ ಒದಗಿಸುವ ನಿಟ್ಟಿನಲ್ಲಿ ಆ.15ರಂದು ವಿಶೇಷ ಡ್ರೈವ್‌ಗೆ ಚಾಲನೆ ಸಿಗಲಿದೆ. ಬಾಪೂಜಿ ಸೇವಾ ಕೇಂದ್ರದಲ್ಲಿ ಹೆಲ್ತ್ ಕಾರ್ಡ್ ಮಾಡಿಕೊಡಲು ಅವಕಾಶ ಕಲ್ಪಿಸಲಾಗಿದೆ. ಎಪಿಎಲ್, ಬಿಪಿಎಲ್ ಕುಟುಂಬದ ಎಲ್ಲ ಸದಸ್ಯರಿಗೆ ಕಾರ್ಡ್ ಸಿಗುವಂತಾಗಬೇಕು. ಈ ದಿಸೆಯಲ್ಲಿ ಆ.15ರಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ಜಿಲ್ಲೆಯಲ್ಲಿ 17.45 ಲಕ್ಷ ಜನಸಂಖ್ಯೆ ಪೈಕಿ ಕೇವಲ 3.50 ಲಕ್ಷ ಮಂದಿಗೆ ಕಾರ್ಡ್ ನೀಡಲಾಗಿದೆ. ವಾರಕ್ಕೆ 2 ಲಕ್ಷ ಕಾರ್ಡ್ ನೀಡುವ ಗುರಿಯೊಂದಿಗೆ 7 ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ಉಮಾ ಮಹದೇವನ್ ತಾಕೀತು ಮಾಡಿದರು.

ಗ್ರಾಪಂನಲ್ಲಿ ಕಂಪ್ಯೂಟರ್ ಆಪರೇಟರ್ ಕೊರತೆ ನೀಗಿಸಲು ಹೆಚ್ಚುವರಿಯಾಗಿ ಒಬ್ಬರನ್ನು ನೇಮಿಸಿಕೊಳ್ಳಲು ಇಷ್ಟರಲ್ಲೇ ಆದೇಶ ಹೊರಬೀಳಲಿದೆ. ಜಿಪಂ ಸಿಇಒ ಅಧ್ಯಕ್ಷತೆಯ ಸಮಿತಿ ನೇಮಕಾತಿ ಮಾಡಿಕೊಳ್ಳಲಿದೆ. ಬಾಪೂಜಿ ಸೇವಾ ಕೇಂದ್ರದ ಆದಾಯದಿಂದಲೇ ಆಪರೇಟರ್‌ಗೆ ವೇತನ ನೀಡಬೇಕು. ಉಮಾ ಮಹದೇವನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net