3 ದಿನ ಮಳೆಯಿಂದ 4 ಡ್ಯಾಂಗೆ 3 ಟಿಎಂಸಿ ನೀರು, ಬಿಳಿಗೊಂಡ್ಲುವಿನಲ್ಲಿ ಹರಿಯಿತು 6500 ಕ್ಯೂಸೆಕ್ ನೀರು

Mekedatu 1
Published on

ಬೆಂಗಳೂರು: ಕಾವೇರಿ ಕಣಿವೆಯಲ್ಲಿ ಕಳೆದ ಮೂರ‌್ನಾಲ್ಕು ದಿನಗಳು ಬಿದ್ದ ಮಳೆಯಿಂದ ನಾಲ್ಕು ಜಲಾಶಯಗಳಿಗೆ ಬಂದಿರುವ ನೀರಿನ ಪ್ರಮಾಣ 3 ಟಿಎಂಸಿಗೆ ಏರಿಕೆ ಆಗಿದೆ. ಏತನ್ಮಧ್ಯೆ ತಮಿಳುನಾಡಿಗೆ 6500 ಕ್ಯೂಸೆಕ್ ತನಕ ಕಾವೇರಿ ನೀರು ಹರಿದಿರುವ ಬಿಳಿಗೊಂಡ್ಲು ಮಾಪನದಲ್ಲಿ ದಾಖಲಾಗಿದೆ.
ಕೆ.ಆರ್.ಎಸ್., ಹೇಮಾವತಿ, ಕಬಿನಿ ಮತ್ತು ಹಾರಂಗಿ ಜಲಾಶಯಗಳಿಗೆ ಮೂರು ದಿನಗಳಲ್ಲಿ 15 ಸಾವಿರದಿಂದ 25 ಸಾವಿರ ಕ್ಯೂಸೆಕ್ ನೀರು ಹರಿದುಬಂದಿದೆ. ಮಳೆಯ ಮೇಲೆ ಭರವಸೆ ಇಟ್ಟುಕೊಂಡಿರುವ ಅಧಿಕಾರಿಗಳು, ಜಲಾಶಯಗಳಿಗೆ ಇನ್ನೂ ಒಳಹರಿವು ಹೆಚ್ಚಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಜಲಾಶಯದಿಂದ 2500 ಕ್ಯೂಸೆಕ್
ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು 2500 ಕ್ಯೂಸೆಕ್‌ಗೆ ತಗ್ಗಿಸಿದ್ದರೂ, ಬಿಳಿಗೊಂಡ್ಲು ಮಾಪನದಲ್ಲಿ 6500 ಕ್ಯೂಸೆಕ್ ಹೊರ ಹರಿವು ದಾಖಲಾಗಿದೆ. ಕೆ.ಆರ್.ಎಸ್ ನೀರು ಬಿಳಿಗೊಂಡ್ಲು ತಲುಪಲು ಸುಮಾರು 200 ಕಿ.ಮೀ. ಹರಿಯಬೇಕು. ಹಾಗೆಯೇ ಕಬಿನಿ ಜಲಾಶಯದ ನೀರು ಬಿಳಿಗೊಂಡ್ಲು ತಲುಪಲು 250 ಕಿ.ಮೀ. ಕ್ರಮಿಸಬೇಕು. ಹಾಗಾಗಿ 200 ಕಿ.ಮೀ. ವ್ಯಾಪ್ತಿಯಲ್ಲಿ ಬಿದ್ದ ಮಳೆಯ ನೀರು ಕಾವೇರಿ ಸೇರಿಕೊಳ್ಳುವುದರಿಂದ ಬಿಳಿಗೊಂಡ್ಲುವಿನಲ್ಲಿ ಹೊರ ಹರಿವು ಹೆಚ್ಚಾಗುತ್ತದೆ. ಸಂಕಷ್ಟದ ಸಂದರ್ಭದಲ್ಲಿ ಮಳೆರಾಯನ ವರದಾನದಿಂದ ಜಲಾಶಯಗಳಿಂದ ಬಿಡಬೇಕಾಗಿರುವ ಮುಂದೆ ನೀರಿನ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಎಂಜಿನೀಯರ್‌ಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net