

ಬೆಂಗಳೂರು: ಹಾಲಿನ ದರವನ್ನು ಪ್ರತಿ ಲೀಟರ್ಗೆ 3 ರೂ. ಹೆಚ್ಚಳ ಮಾಡಲು ಕರ್ನಾಟಕ ಹಾಲು ಒಕ್ಕೂಟ ಮುಂದಾಗಿದ್ದು, ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಈ ವಿಷಯ ಖಚಿತಪಡಿಸಿದ್ದು, ಗ್ರಾಹಕರಿಗೆ ಮಾರಾಟ ಮಾಡಲಾಗುವ ಹಾಲಿನ ದರ ಸದ್ಯ ಲೀಟರ್ಗೆ 37 ರೂ. ಇದ್ದು, ಅದನ್ನು 40 ರೂ.ಗೆ ಏರಿಕೆ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಲಾಗುವುದು. ಹೆಚ್ಚುವರಿ 3 ರೂ. ಗಳನ್ನು ರೈತರಿಗೆ ನೀಡಲಾಗುವುದು ಎಂದು ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ನಡೆದ ಕೆಎಂಎಫ್ 2020-21ನೇ ಸಾಲಿನ ವಾರ್ಷಿಕ ಸಾಮಾನ್ಯಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ನಂದಿನಿ ಹಾಲಿನ ದರವು ರಾಜ್ಯದಲ್ಲಿ ಅತೀ ಕಡಿಮೆ ಇದೆ. ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಪ್ರತಿ ಲೀಟರ್ಗೆ 3 ರೂ. ಏರಿಕೆ ಮಾಡುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸಿಎಂ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ಬೆಳಗಾವಿಯಲ್ಲಿ ಮೆಗಾ ಫುಡ್ ಪಾರ್ಕ್: ನಂದಿನಿ ಉತ್ಪನ್ನಗಳ ಮಾರಾಟವನ್ನು ದೇಶಾದ್ಯಂತ ವಿಸ್ತರಿಸಲು ಬೆಳಗಾವಿಯಲ್ಲಿ ನಂದಿನಿ ಮೆಗಾ ಫುಡ್ ಪಾರ್ಕ್ ಅನ್ನು ಆರಂಭಿಸುವ ಕಾರ್ಯ ಪ್ರಗತಿಯಲ್ಲಿದೆ. ಪನ್ನೀರ್ ಹಾಗೂ ಚೀಸ್ ಆಧಾರಿದ ಉತ್ಪನ್ನಗಳು ಮತ್ತು ಇತರ ನಂದಿನಿ ಸಿಹಿ ಉತ್ಪನ್ನಗಳನ್ನು ಈ ಘಟಕದಲ್ಲಿ ಉತ್ಪಾದಿಸಿ ಮಾರುಕಟ್ಟೆ ಜಾಲ ವಿಸ್ತರಿಸಲಾಗುವುದು ಎಂದರು.
ಹಾಸನದಲ್ಲಿ ಪೆಟ್ ಬಾಟಲ್: ಹಾಸನ ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ ನೂತನ ಪೆಟ್ ಬಾಟಲ್ ಘಟಕವನ್ನು ಅಳವಡಿಸಿದ್ದು, ಇಲ್ಲಿ ಸುಹಾಸಿತ ಹಾಲು, ಲಸ್ಸಿ ಸೇರಿ ಸುಮಾರು 15 ಹೊಸ ಉತ್ಪನ್ನಗಳ ಉತ್ಪಾದನೆ ಮಾಡಲಾಗುವುದು. ಪ್ರತಿನಿತ್ಯ 5 ಲಕ್ಷ ಪೆಟ್ ಬಾಟಲ್ ಉತ್ಪಾದನೆಯಾಗಲಿದ್ದು, ದೇಶ ವ್ಯಾಪ್ತಿ ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲಾಗುವುದು ಎಂದು ಹೇಳಿದರು.
ವಿಷನ್ 2025-26: ಹೊರ ರಾಜ್ಯಗಳಲ್ಲಿ ನಂದಿನಿ ಹಾಲು ಮತ್ತು ಉತ್ಪನ್ನಗಳ ಮಾರಾಟ ವಿಸ್ತರಿಸಲು ವಿಷನ್ 2025-26 ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ಶಾಸಕರಾದ ಭೀಮಾ ನಾಯಕ್, ನಂಜೇಗೌಡ, ಕೆಎಂಎಫ್ ನಿರ್ದೇಶಕರಾದ ಎಚ್.ಜಿ. ಹಿರೇಗೌಡರ, ಕಾ.ಪು. ದಿವಾಕರ ಶೆಟ್ಟಿ, ಮಾರುತಿ ಕಾಶೆಂಪೂರ, ಶ್ರೀಶೈಲಗೌಡ ಪಾಟೀಲ, ಕೆ.ಎಚ್. ಕುಮಾರ, ಆನಂದ ಕುಮಾರ, ಆರ್. ಶ್ರೀನಿವಾಸ, ಎಂ.ನಂಜುಂಡಸ್ವಾಮಿ, ವೀರಭದ್ರಬಾಬು, ವಿ.ಎಂ. ವಿಶ್ವನಾಥ, ಎಂ.ಕೆ. ಪ್ರಕಾಶ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ ಇತರರು ಉಪಸ್ಥಿತರಿದ್ದರು.
1017 ಕೋಟಿ ರೂ. ವಹಿವಾಟು: 2021-22ನೇ ಸಾಲಿನಲ್ಲಿ ಕೆಎಂಎಫ್ನ 5 ಪಶು ಆಹಾರ ಘಟಕಗಳಿಂದ 7.28 ಲಕ್ಷ ಮೆಟ್ರಿಕ್ ಟನ್ ಪಶು ಆಹಾರ ಉತ್ಪಾದಿಸಿ ಮಾರಾಟ ಮಾಡುವ ಗುರಿ ಹೊಂದಲಾಗಿದ್ದು, ಅಂದಾಜು 1017 ಕೋಟಿ ರೂ.ಗಳ ವಹಿವಾಟು ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಮಾರಾಟವನ್ನು ಆಯಾ ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಸಮಗ್ರ ಮಾರುಕಟ್ಟೆ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.