

ನವದೆಹಲಿ: ಎರಡನೇ ಬ್ಯಾಚ್ನ ರಫೇಲ್ ಯುದ್ಧ ವಿಮಾನ ಫ್ರಾನ್ಸ್ ನಿಂದ ಭಾರತಕ್ಕೆ ಬುಧವಾರ ರವಾನೆಯಾಗಿದೆ. ಮೂರು ರಫೆಲ್ ಜೆಟ್ಗಳು ಫ್ರಾನ್ಸ್ ನಿಂದ ನೇರವಾಗಿ ಗುಜರಾತ್ ವಾಯುನೆಲೆಗೆ ಬಂದಿದೆ.
ಫ್ರಾನ್ಸ್ನ ಸಮೀಪ ಆಗಸದಲ್ಲೇ ವಿಮಾನ ಇಂಧನ ತುಂಬಿಸಿಕೊಂಡಿದೆ. ಹೊಸ ಮೂರು ಜೆಟ್ಗಳ ಸೇರ್ಪಡೆ ಬಳಿಕ ಭಾರತೀಯ ವಾಯುಪಡೆಗೆ 8 ಅತ್ಯಾಧುನಿಕ ರಫೆಲ್ ಜೆಟ್ಗಳ ಬಲ ಬಂದಂತಾಗಿದೆ. ಇದಕ್ಕೂ ಮೊದಲು ಜುಲೈ 29 ರಂದು 5 ರಫೆಲ್ ವಿಮಾನಗಳ ಮೊದಲ ಬ್ಯಾಚ್ನ್ನು ಭಾರತ ಸ್ವೀಕರಿಸಿತ್ತು.
ಸೆಪ್ಟೆಂಬರ್ 10ರಂದು ನಡೆದ ಕಾರ್ಯಕ್ರಮದಲ್ಲಿ ಅವುಗಳನ್ನು ಅಧಿಕೃತವಾಗಿ ವಾಯುಪಡೆಗೆ ನಿಯೋಜಿಸಲಾಯಿತು. 59,000 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಫ್ರಾನ್ಸ್ನೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದ್ದು, ಇದರ ಅನ್ವಯ ಹಂತ ಹಂತವಾಗಿ 2022ರ ವೇಳೆಗೆ ಎಲ್ಲ ಜೆಟ್ಗಳನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ಫ್ರಾನ್ಸ್ ಹೇಳಿದೆ.