

ಶಿಡ್ಲಘಟ್ಟ : ಮಕ್ಕಳ ಅಭಿವೃದ್ಧಿಗೆ ತಾಲೂಕುಮಟ್ಟದಲ್ಲಿ ಅನುಷ್ಠಾನಗೊಳಿಸಲಾಗಿರುವ ಯೋಜನೆಗಳ ಹಾಗೂ ಸಮಸ್ಯೆಗಳ ಅಂಕಿ-ಅಂಶಗಳನ್ನು ಎಲ್ಲ ಇಲಾಖೆಗಳು ಕಡ್ಡಾಯವಾಗಿ ಹೊಂದಿರುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಅಶೋಕ್ ಯರಗಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
ಮಕ್ಕಳ ಹಕ್ಕುಗಳ ಮಾಸಾಚರಣೆ ಅಂಗವಾಗಿ ಮಂಗಳವಾರ ನಗರದ ಸ್ತ್ರೀಶಕ್ತಿ ಭವನದಲ್ಲಿ ಏರ್ಪಡಿಸಿದ್ದ ಮಕ್ಕಳ ಅಭಿವೃದ್ಧಿ ತಾಲೂಕುಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಮಕ್ಕಳ ಹಕ್ಕುಗಳ ಸ್ಥಿತಿಗತಿ ಮತ್ತು ಕಾರ್ಯಕ್ರಮಗಳ ಕುರಿತು ಪ್ರತಿ 3 ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸುವಂತೆ ನಿರ್ದೇಶನ ನೀಡಿದರು.
ಅನಾಥರು ಮತ್ತು ಎಚ್‌ಐವಿ ಬಾಧಿತ ಮಕ್ಕಳ ಖಾತೆಗೆ ಸಾವಿರ ರೂ. ಜಮೆ ಮಾಡಲಾಗುತ್ತಿದೆ, 72 ಲಾನುಭವಿಗಳಿದ್ದು, 72 ಮಂದಿ ಇದ್ದಾರೆ. ದತ್ತು ಕಾರ್ಯಕ್ರಮದ ಅಡಿಯಲ್ಲಿ 14 ಮಕ್ಕಳು ದಾಖಲಾಗಿದ್ದು, ಈ ಪೈಕಿ 6 ಮಕ್ಕಳನ್ನು ದತ್ತು ನೀಡಲಾಗಿದೆ. 2020-21 ನೇ ಸಾಲಿನಲ್ಲಿ 110 ಬಾಲ್ಯವಿವಾಹ ದೂರು ದಾಖಲಾಗಿದ್ದವು, ಇವುಗಳಲ್ಲಿ 103 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ 23 ದೂರುಗಳು ದಾಖಲಾಗಿವೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು.ಮಕ್ಕಳ ಹಕ್ಕುಗಳ ಮಾಸಾಚರಣೆ ಅಂಗವಾಗಿ ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.
ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ವೆಂಕಟೇಶಮೂರ್ತಿ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಪ್ರತಿನಿಧಿಗಳು, ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಯೋಜಕ ಸತೀಶ್ ಜಯರಾಂ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.