

ಮಹೊಬಾ (ಉತ್ತರ ಪ್ರದೇಶ): ಸೋಮವಾರ ತಡರಾತ್ರಿ ಉತ್ತರ ಪದೇಶದ ಝಾನ್ಸಿ-ಮಿರ್ಜಾಪುರ್ ಹೆದ್ದಾರಿಯಲ್ಲಿ ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಒಂದು ಉರುಳಿಬಿದ್ದು ಮೂವರು ಮಹಿಳಾ ಕಾರ್ಮಿಕರು ಸಾವಿಗೀಡಾಗಿ, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ವಲಸೆ ಕಾರ್ಮಿಕರ ಗುಂಪೊಂದು ರಾಷ್ಟ್ರ ರಾಜಧಾನಿ ದೆಹಲಿಯಿಂದ ಪೂರ್ವ ಉತ್ತರ ಪದೇಶದ ತಮ್ಮ ಗ್ರಾಮಗಳಿಗೆ ಕಾಲ್ನಡಿಗೆಯಲ್ಲಿ ಬರುವಾಗ ನಡುದಾರಿಯಲ್ಲಿ ಸಿಕ್ಕ ಟ್ರಕ್ ಡ್ರೈವರ್ ಡ್ರಾಪ್ ಕೊಡುವುದಾಗಿ ಹತ್ತಿಸಿಕೊಂಡು ಉತ್ತರ ಪ್ರದೇಶದತ್ತ ಬರುವಾಗು ದುರ್ಘಟನೆ ಸಂಭವಿಸಿದೆ.
ಲಾಕ್ಡೌನ್ ಆದಾಗಿನಿಂದ ಕೆಲಸವಿಲ್ಲದೇ ತಮ್ಮ ಊರುಗಳಿಗೆ ಮರುಳುವ ಪ್ರಯತ್ನದಲ್ಲಿ ಈವರೆಗೆ 50 ವಲಸೆ ಕಾರ್ಮಿಕರು ಕಳೆದು 10 ದಿನಗಳಲ್ಲಿ ಮೃತಪಟ್ಟಿದ್ದಾರೆ. ಕಳೆದ ಶನಿವಾರವಷ್ಟೇ 26 ಕಾರ್ಮಿಕರು ಅಪಘಾತದಲ್ಲಿ ಸಾವಿಗೀಡಾಗಿದ್ದರು. ಅಲ್ಲದೆ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಲಖನೌದಿಂದ 180 ಕಿ.ಮೀ. ದೂರದಲ್ಲಿರುವ ಔರೈಯಾ ಜಿಲ್ಲೆಯಲ್ಲಿ ಎರಡು ಟ್ರಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು.
ಭೀಕರ ಅಪಘಾತಕ್ಕೆ ಇಡೀ ರಾಷ್ಟ್ರವೇ ಕಂಬನಿ ಮಿಡಿದಿತ್ತು. ಇದರಿಂದ ಅಂತಾರಾಜ್ಯ ಗಡಿಯನ್ನೇ ಸಿಎಂ ಯೋಗಿ ಆದಿತ್ಯನಾಥ್ ಅವರು ಮುಚ್ಚುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೆ, ಕಾಲ್ನಡಿಗೆ, ಟ್ರಕ್, ಸೈಕಲ್ನಲ್ಲಿ ತವರಿಗೆ ಮರಳುವವರನ್ನು ತಡೆದು ಅವರಿಗೆ ಆಶ್ರಯ ಮತ್ತು ಆಹಾರ ವ್ಯವಸ್ಥೆ ಮಾಡಿಕೊಡಿ ಎಂದು ಯೋಗಿ ಆದೇಶಿಸಿದ್ದಾರೆ. (ಏಜೆನ್ಸೀಸ್)