ಕಾರುಗಳ ಮಧ್ಯೆ ಸಂಭವಿಸಿತು ಭೀಕರ ಅಪಘಾತ; ಮೂವರು ಮೃತ್ಯು!

Untitled design (23)
Published on

ಮುಂಬೈ: ವರ್ಲಿ ಸೀ ಲಿಂಕ್‌ನಲ್ಲಿರುವ ಬಾಂದ್ರಾದ ಟೋಲ್ ಪ್ಲಾಜಾದಲ್ಲಿ ಗುರುವಾರ (ನ.10) ರಾತ್ರಿ 10 ಗಂಟೆ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದ್ದು, ಟೋಲ್​ ಬಳಿ ಸರತಿ ಸಾಲಿನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ವೇಗವಾಗಿ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಉತ್ತರ ದಿಕ್ಕಿನ ಲೇನ್‌ನಲ್ಲಿ ಸಮುದ್ರ ಸಂಪರ್ಕಿಸುವ ಬಾಂದ್ರಾ ಟೋಲ್ ಬೂತ್‌ಗೆ ಸುಮಾರು 100 ಮೀಟರ್ ಮೊದಲು ಇನ್ನೋವಾ ಕಾರೊಂದು ಮರ್ಸಿಡಿಸ್ ಬೆಂಜ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಅಪಘಾತ ಸಂಭವಿಸಿದೆ ಎಂದು ವಲಯ 9ರ ಉಪ ಪೊಲೀಸ್ ಆಯುಕ್ತ (DCP) ಕೃಷ್ಣಕಾಂತ್ ಉಪಾಧ್ಯಾಯ ಹೇಳಿದ್ದಾರೆ.

"ಅಪಘಾತ ಸಂಭವಿಸಿದ ಬೆನ್ನಲ್ಲೇ ಇನ್ನೋವಾ ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದ. ವಾಹನವು ಟೋಲ್ ಬೂತ್ ತಲುಪುತ್ತಿದ್ದಂತೆ, ಹಲವಾರು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ 6 ಜನರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು" ಎಂದು ಡಿಸಿಪಿ ಹೇಳಿದ್ದಾರೆ.

"ಇನ್ನೋವಾ ಚಾಲಕ ಸೇರಿದಂತೆ ಗಾಯಗೊಂಡಿರುವ ಆರು ಮಂದಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ವರದಿಯ ಮಾಹಿತಿಯಂತೆ ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ 10ರಿಂದ 12 ಮಂದಿ ಗಾಯಗೊಂಡಿದ್ದು, 6 ಜನರ ಸ್ಥಿತಿ ಗಂಭೀರವಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಬಾಂದ್ರಾ ಪಶ್ಚಿಮದಲ್ಲಿರುವ ಭಾಭಾ ಆಸ್ಪತ್ರೆಗೆ ದಾಖಲಿಸಿದ್ದಾರೆ(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net