ಬಂಗಾಳದಲ್ಲಿ ನಿಗದಿಯಾದಂತೇ 3 ದಿನ ಮತದಾನ : ಚುನಾವಣಾ ಆಯೋಗ

ec
Published on

ಕೊಲ್ಕತಾ : ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಉಳಿದ ಮೂರು ಹಂತಗಳನ್ನು ಒಟ್ಟುಗೂಡಿಸುವುದು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಹಾಗಾಗಿ ಅದಾಗಲೇ ನಿಗದಿಯಾಗಿರುವಂತೆ ಏಪ್ರಿಲ್ 22, 26 ಮತ್ತು 29 ರಂದು ಕ್ರಮವಾಗಿ 43, 36 ಮತ್ತು 35 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

ಬಂಗಾಳ ವಿಧಾನಸಭೆಗೆ ಈ ಬಾರಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಐದು ಹಂತಗಳಿಗೆ ಮತದಾನ ಪೂರ್ಣಗೊಂಡಿದ್ದು, ಇನ್ನೂ ಮೂರು ಹಂತದ ಮತದಾನ ಬಾಕಿ ಇದೆ. ಕೊನೆಯ ಹಂತ ಏಪ್ರಿಲ್ 29 ರಂದು ನಿಗದಿಪಡಿಸಲಾಗಿದ್ದು, ಎಲ್ಲಾ ಹಂತಗಳ ಮತಗಳನ್ನು ಮೇ 2 ರಂದು ಎಣಿಕೆ ಮಾಡಿ ಫಲಿತಾಂಶ ಘೋಷಿಸಲಾಗುತ್ತದೆ.

ಈ ನಡುವೆ ಕರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಉಳಿದ ಮೂರು ಹಂತಗಳನ್ನು ಒಟ್ಟಿಗೆ ಸೇರಿಸಿ, ಒಂದೇ ಬಾರಿಗೆ ಮತದಾನ ನಡೆಸಲು ಆಡಳಿತಾರೂಢ ಟಿಎಂಸಿ ಸಲಹೆ ನೀಡಿತ್ತು. ಇದರಿಂದ ಜನರು ಕರೊನಾ ಕಾಯಿಲೆಗೆ ಮತ್ತಷ್ಟು ಒಡ್ಡಿಕೊಳ್ಳದಂತೆ ರಕ್ಷಿಸಬಹುದು ಎಂದು ಟಿಎಂಸಿ ವಾದಿಸಿತ್ತು. ಆದರೆ, ಅಭ್ಯರ್ಥಿಗಳಿಗೆ ಪ್ರಚಾರ ಮಾಡಲು ಸಮನಾದ ಅವಕಾಶ ಸಿಗುವುದಿಲ್ಲ ಎಂಬ ಕಾರಣ ಹೇಳಿ ಇದನ್ನು ಬಿಜೆಪಿ ವಿರೋಧಿಸಿತ್ತು.

ಈ ವಿಚಾರವನ್ನು ಪರಿಗಣಿಸಿ, ಟಿಎಂಸಿ ಸಂಸದ ಡೆರಿಕ್ ಓ ಬ್ರೇನ್ ಅವರಿಗೆ ವಿವರವಾದ ಪತ್ರ ಬರೆದಿರುವ ಚುನಾವಣಾ ಆಯೋಗವು, "ವಿವಿಧ ಹಂತದ ಮತದಾನಗಳನ್ನು ಒಟ್ಟುಗೂಡಿಸುವುದು ಸಾಧ್ಯವಿಲ್ಲ. ಎಷ್ಟೋ ದಿನಗಳ ಮುಂಚೆ ನಡೆದ ತಯಾರಿಗಳನ್ನು ಈಗ ದಿಢೀರನೇ ಬದಲಾಯಿಸುವುದು ಸರಿಬರುವುದಿಲ್ಲ" ಎಂದಿದೆ. ಪ್ರಚಾರ ಕಾರ್ಯಕ್ರಮಗಳ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸುವುದೂ ಸೇರಿದಂತೆ ಮತದಾನವು ಸುರಕ್ಷಿತವಾಗಿ ನಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗ ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net