ಕರೊನಾ ಕರ್ಫ್ಯೂ: ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ನೀಡಿದ ಮಹತ್ವದ ಸೂಚನೆಗಳು

kamal panth
Published on

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಹೇರಲಾಗಿರುವ ಕರ್ಫ್ಯೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುವುದು ಕಂಡು ಬಂದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಸಿದ್ದಾರೆ.

ಬುಧವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 144 ಸೆಕ್ಷನ್ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಬಸ್ಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹೊರತುಪಡಿಸಿ ಬೇರೆ ಕಡೆ 4ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಆದೇಶಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈ ಗೊಳ್ಳಲಾಗುವುದು. ಪೊಲೀಸ್ ಅಧಿಕಾರಿಗಳು ನಗರದಲ್ಲಿರುವ ಕಲ್ಯಾಣ ಮಂಟಪ ಮಾಲೀಕರ ಜತೆ ಮಾತುಕತೆ ನಡೆಸಿದ್ದಾರೆ. ನಿಯಮ ಉಲ್ಲಂಘಿಸಿದ ಕಲ್ಯಾಣ ಮಂಟಪಗಳನ್ನು ಸೀಜ್ ಮಾಡಲಾಗುವುದು ಎಂದರು.

ಇಂದಿನಿಂದ ನೈಟ್ ಕರ್ಪ್ಯೂ ರಾತ್ರಿ 9 ಗಂಟೆಯಿಂದ ಬೆಳ್ಳಗ್ಗೆ 6 ಗಂಟೆಯವರೆಗೆ ಇರುತ್ತದೆ. ರಾತ್ರಿವೇಳೆ ಪ್ರಯಾಣಿಕರು ಟಿಕೆಟ್ ತೋರಿಸಿ ಪ್ರಯಾಣ ಮಾಡಬಹುದು. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ತನಕ ಯಾವುದೇ ಚುಟುವಟಿಕೆಗಳು ಇರಲ್ಲ. ಶೇ.99.99 ರಷ್ಟು ಚುಟುವಟಿಕೆಗಳು ಈ ಎರಡು ದಿನ ಇರುವುದಿಲ್ಲ. ಸಭೆ, ಸಮಾರಂಭಗಳು ದಾರ್ಮಿಕ ಕಾರ್ಯಕ್ರಮಗಳಿಗೆ ಸಹ ಯಾವುದೇ ಅವಕಾಶ ವಿಲ್ಲ ಎಂದರು.

ವಾಹನ ಜಪ್ತಿ ಮಾಡಲಾಗುವುದು: ಕರೊನಾ ನಿಯಮ ಗಾಳಿಗೆ ತೂರಿ ಕಾನೂನು ಉಲ್ಲಂಘನೆ ಮಾಡಿದರೆ ವಾಹನ ಜಪ್ತಿ ಮಾಡಲಾಗುವುದು. ಜನರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕಾರ ನೀಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಈ ತಿಂಗಳಲ್ಲಿ 218 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. 13 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪಂತ್ ಹೇಳಿದರು.

ಆಸ್ಪತ್ರೆ ಸಿಬ್ಬಂದಿ ಜತೆ ಚರ್ಚೆ: ನಮ್ಮ ಪೊಲೀಸ್ ಅಧಿಕಾರಿಗಳು ಸಹ ಕೋವಿಡ್ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ನಮ್ಮ ಪೊಲೀಸರಿಗೆ ಸಹ ಆಸ್ಪತ್ರೆ ಗಳಲ್ಲಿ ಬೆಡ್ ವ್ಯವಸ್ಥೆ ಮಾಡಲಾಗಿದೆ. 100 ಕ್ಕೂ ಹೆಚ್ಚು ಆಸ್ಪತ್ರೆಗಳ ಸಿಬ್ಬಂದಿ ಜತೆ ಸಭೆ ನಡೆಸಲಾಗಿದೆ. ಆಂಬುಲೆನ್ಸ್‌ನವರು ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟರೆ ಅಂತವರ ವಿರುದ್ಧ ಕ್ರಮ ದಾಖಲು ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net