ಬೆಂಗಳೂರು:
ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ರಾಜಕೀಯ ನಾಯಕರುಗಳು ರಿಲ್ಯಾಕ್ಸ್ ಮೂಡಿಗೆ ತೆರಳಿದ್ದಾರೆ.
ಪ್ರಚಾರ ಮುಗಿಯುತ್ತಿದ್ದಂತೆ ಸ್ವಸ್ಥಾನಗಳಿಗೆ ಮರಳಿರುವ ಶಾಸಕರು, ಸಚಿವರು, ಮಾಜಿ ಶಾಸಕರು ಮತ್ತು ಮಾಜಿ ಸಚಿವರು ಹಾಗೂ ಮುಖಂಡರುಗಳು ಈಗ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಕೆಲ ಪ್ರಮುಖರು ಒಂದೆರಡು ದಿನ ವಿಶ್ರಾಂತಿ ಪಡೆಯಲು ನಿರ್ಧರಿಸಿ ರೆಸಾರ್ಟ್ ಮೊರೆ ಹೋಗದಿದ್ದರೆ, ಇನ್ನು ಕೆಲವರು ಮನೆಯಲ್ಲಿಯೇ ರಿಲ್ಯಾಕ್ಸ್ ಮಾಡುತ್ತಿದ್ದಾರೆ. ಹರಕೆ ಹೊತ್ತು ದೇವಸ್ಥಾನಗಳಿಗೆ ಹೋದವರು ಇದ್ದಾರೆ.
ನ.13ರಂದು ಚುನಾವಣೆ ನಡೆದ ಮರು ದಿನವೇ ನ.14ರಂದು ಸಚಿವ ಸಂಪುಟ ಸಭೆ ಇರುವುದರಿಂದ ಸಚಿವರುಗಳು ವಿಧಾನಸೌಧಕ್ಕೆ ಆಗಮಿಸಲಿದ್ದು, ಅಂದು ಶಕ್ತಿ ಸೌಧ ಬ್ಯುಸಿ ಇರಲಿದೆ.
ಮಹಾರಾಷ್ಟ್ರ ಪ್ರಚಾರಕ್ಕೆ ಸಿಎಂ
ನ.15ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಹಾರಾಷ್ಟ್ರ ಚುನಾವಣೆ ಪ್ರಚಾರಕ್ಕೆ ತೆರಳಲಿದ್ದಾರೆ. ಕನ್ನಡಿಗರ ಪ್ರಭಾವ ಇರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.