

ಲಖನೌ: ಜಮೀನು ವಿವಾದಕ್ಕೆ (Land Dispute) ಸಂಬಂಧಿಸಿದಂತೆ ಮೂವರು ಸಹೋದರರು ತಾಯಿ ಹಾಗೂ ಸಹೋದರಿಯನ್ನು ಜೀವಂತ ಸುಟ್ಟು ಹಾಕಿರುವ ಘಟನೆ ಉತ್ತರಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಮೃತರ ಹಿರಿಯ ಮಗಳು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ಧಾರೆ.
ಘಟನೆ ಕುರಿತು ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಚೌಧರಿ, ಜನೀನು ವಿವಾದಕ್ಕೆ (land Dispute) ಸಂಬಂಧಿಸಿದಂತೆ ಕುಟುಂಬದಲ್ಲಿ ಕೆಲ ದಿನಗಳಿಂದ ಗಲಾಟೆಯಾಗುತ್ತಿದ್ದು, ಕಮಲೇಶ್, ಕರುಣಾಕರ್ ಮತ್ತು ಕೌಶಲ್ ಮಹಿಳೆ ಹಾಗೂ ಆಕೆಯ ಮಗಳನ್ನು ಜೀವಂತವಾಗಿ ಸುಟ್ಟು ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತಳ ಪುತ್ರಿ ಸವಿತಾ ಗುರುವಾರ (ಡಿಸೆಂಬರ್ 06) ತನ್ನ ತಾಯಿಗೆ ಅನೇಕ ಬಾರಿ ಕರೆ ಮಾಡಿದ್ದು, ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡು ನೆರೆ ಹೊರೆಯವರಿಗೆ ಕಾಲ್ ಮಾಡಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಜಮೀನು ವಿವಾದಕ್ಕೆ (Land Dispute) ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದ್ದು, ಈ ವಿಚಾರವಾಗಿ ಮಕ್ಕಳು ಹಾಗೂ ತಾಯಿಯ ನಡುವೆ ಸಂಘರ್ಷ ಏರ್ಪಟ್ಟಿತ್ತು.
ಜಮೀನು ವಿಚಾರವಾಗಿ ಹತ್ಯೆ ನಡೆದಿದ್ದು, ಆರೋಪಿಗಳು ತಲೆಮಾರಿಸಿಕೊಂಡಿದ್ಧಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಚೌಧರಿ ತಿಳಿಸಿದ್ಧಾರೆ.