

Anticipated Films: ಭಾರತೀಯ ಚಿತ್ರೋದ್ಯಮಕ್ಕೆ ಈ ವರ್ಷದ ಮೊದಲಾರ್ಧಕ್ಕಿಂತ ದ್ವಿತೀಯಾರ್ಧ ದೊಡ್ಡ ವರವಾಗಿದೆ. ಇದಕ್ಕೆ ಕಾರಣ, ಜೂನ್ ತಿಂಗಳ ನಂತರ ತೆರೆಕಂಡ ಹಲವು ಭಾಷೆಯ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಮಾಡುತ್ತಿರುವ ಕಮಾಲ್. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳ ಚಿತ್ರಗಳು ಒಂದಕ್ಕಿಂತ ಒಂದು ಸಿನಿಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿವೆ. ಈ ಪೈಕಿ ಕನ್ನಡದ 'ಸು ಫ್ರಮ್ ಸೋ' ಮತ್ತು ತಮಿಳಿನ 'ಕೂಲಿ' ಚಿತ್ರಗಳು ಸಖತ್ ಸದ್ದು ಮಾಡಿವೆ.
ಮೊದಲಾರ್ಧಕ್ಕಿಂತ ದ್ವಿತೀಯಾರ್ಧದಲ್ಲಿ ಸಾಲು ಸಾಲು ಚಿತ್ರಗಳು ತೆರೆಗೆ ಅಪ್ಪಳಿಸುತ್ತಿದ್ದು, ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳತ್ತ ಕೈಬೀಸಿ ಕರೆಯುತ್ತಿವೆ. ಈ ಸಾಲಿನಲ್ಲಿ ರಾಜ್ ಬಿ.ಶೆಟ್ಟಿ ನಿರ್ಮಾಣದ ಹಾಗೂ ಜೆಪಿ ತುಮಿನಾಡ್ ನಿರ್ದೇಶನದ 'ಸು ಫ್ರಮ್ ಸೋ' ಹೊಸ ದಾಖಲೆಯನ್ನೇ ಬರೆದಿದೆ. ಟಿಕೆಟ್ ಬುಕ್ಕಿಂಗ್ನಲ್ಲಿ ದಾಖಲೆ ನಿರ್ಮಿಸಿದ ಈ ಕನ್ನಡ ಸಿನಿಮಾ, ಮೊದಲ ದಿನಕ್ಕಿಂತ ನಂತರದ ದಿನಗಳಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚುವರಿ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿತು. ನೋಡುಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್ಗಳಿಗೆ ದೌಡಾಯಿಸಿದ್ದು, ಕನ್ನಡ ಚಿತ್ರಕ್ಕೆ ವಿಶೇಷ ಮನ್ನಣೆ, ಗೆಲುವು ಸಿಕ್ಕಿತು.
ಇದೀಗ ಮೂರು ಬಹುನಿರೀಕ್ಷಿತ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿದ್ದು, ಚಿತ್ರರಸಿಕರಿಗೆ ಯಾವುದನ್ನು ನೋಡಬೇಕು? ಯಾವುದನ್ನು ಬಿಡಬೇಕು ಎಂಬ ಗೊಂದಲವನ್ನು ತಂದಿಟ್ಟಿದೆ. ಹಾಲಿವುಡ್ನ ಯಶಸ್ವಿ ಹಾಗೂ ಬ್ಲಾಕ್ಬಸ್ಟರ್ ಹಾರರ್ ಸರಣಿಯಾದ 'ದಿ ಕಾಂಜುರಿಂಗ್: ಲಾಸ್ಟ್ ರೈಟ್ಸ್', ತೆಲುಗು ನಟಿ ಅನುಷ್ಕಾ ಶೆಟ್ಟಿ ಅಭಿನಯದ 'ಘಾಟಿ' ಮತ್ತು ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಬೆಂಗಾಲ್ ಫೈಲ್ಸ್' ಚಿತ್ರಗಳು ಸೆ.05ರಂದು ಬಿಡುಗಡೆಯಾಗಲಿದೆ. ಈ ಚಿತ್ರಗಳು ತಮ್ಮ ಟ್ರೇಲರ್ ಹಾಗೂ ಪೋಸ್ಟರ್ಗಳ ಮೂಲಕ ಜಾಲತಾಣಗಳಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ. ಒಂದೇ ದಿನ ತೆರೆಕಾಣಲಿರುವ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹೇಗೆ ಕಮಾಲ್ ಮಾಡಲಿವೆ? ಪೈಪೋಟಿ ಕೊಡಲಿದ್ಯಾ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
1. ದಿ ಕಾಂಜುರಿಂಗ್: ಲಾಸ್ ರೈಟ್ಸ್ (ಇಂಗ್ಲಿಷ್)
2. ಘಾಟಿ (ತೆಲುಗು)
3. ದಿ ಬೆಂಗಾಲ್ ಫೈಲ್ಸ್ (ಹಿಂದಿ)