ಮೂರೂವರೆ ಲಕ್ಷ ಪಡಿತರ ಚೀಟಿ ಅನರ್ಹ; ಆಹಾರ ಇಲಾಖೆ ಸ್ಪಷ್ಟನೆ, ಆರ್ಥಿಕ ಸಬಲರು ಯೋಜನೆಯಿಂದ ಹೊರಕ್ಕೆ

Ration Card
Published on

ಬೆಂಗಳೂರು: ಖೊಟ್ಟಿ ದಾಖಲೆಗಳನ್ನು ನೀಡಿ ಈ ಹಿಂದೆ ಆರ್ಥಿಕ ಸಬಲರು ಪಡೆದಿದ್ದ ರೇಷನ್ ಕಾರ್ಡ್​ಗಳ ಪಟ್ಟಿಯಲ್ಲಿ ಒಟ್ಟು 3,55,516 ಕುಟುಂಬಗಳನ್ನು ಆಹಾರ ಇಲಾಖೆ ಅನರ್ಹಗೊಳಿಸಿದೆ. 85,204 ಆದಾಯ ತೆರಿಗೆ ಪಾವತಿದಾರ ಕುಟುಂಬಗಳು, 2,127 ಸರ್ಕಾರಿ ನೌಕರರು, ಮೂರು ಹೆಕ್ಟರ್ಕ್ಕಿಂತ ಹೆಚ್ಚು ಜಮೀನು ಹೊಂದಿರುವವ 2,18,125 ಕುಟುಂಬಗಳು ಹಾಗೂ ಒಂದು ಲಕ್ಷ ಇಪತ್ತು ಸಾವಿರ ರೂ.ಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ 50,060 ಕುಟುಂಬಗಳ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ ಎಂದು ಇಲಾಖೆ ನೀಡಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

27,527 ಅಂತ್ಯೋದಯ, 3,28,178 ಬಿಪಿಎಲ್ ಕಾರ್ಡ್​ಗಳು ರದ್ದಾಗಿವೆ. 7,413 ಅಂತ್ಯೋದಯದಿಂದ ಬಿಪಿಎಲ್ ಕಾರ್ಡ್​ಗೆ, 1,09,790 ಬಿಪಿಎಲ್ ಕಾರ್ಡ್​ನಿಂದ ಎಪಿಎಲ್ ಕಾರ್ಡ್​ಗೆ ಪರಿವರ್ತನೆ ಹೊಂದಿವೆ. ಇದುವರೆಗೆ 1,17,203 ಕುಟುಂಬಗಳನ್ನು ಬೇರೆ ಬೇರೆ ಆದ್ಯತೆ ಹಾಗೂ ಆದ್ಯತೆಯೇತರ ವಲಯಕ್ಕೆ ಪರಿವರ್ತಿಸಲಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರವು ರಾಜ್ಯದ 4.2 ಕೋಟಿ ಫಲಾನುಭವಿಗಳಿಗೆ ಪಡಿತರ ಹಂಚಿಕೆ ಮಾಡುತ್ತಿದೆ. ಆದರೆ, ರಾಜ್ಯದಲ್ಲಿ ಪ್ರಸ್ತುತ 10,91,896 ಅಂತ್ಯೋದಯ ಕುಟುಂಬಗಳು, 1,15,30,817 ಬಿಪಿಎಲ್ ಕುಟುಂಬುಗಳು ಸೇರಿ ಒಟ್ಟು 4,29, 51,933 ಫಲಾನುಭವಿಗಳಿಗೆ ಪ್ರತಿ ತಿಂಗಳು ಆಹಾರ ಧಾನ್ಯ ಹಂಚಿಕೆ ಮಾಡಲಾಗುತ್ತಿದೆ.ಇದರಿಂದ, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಆದ್ದರಿಂದ, ಮಾನದಂಡ ಉಲ್ಲಂಘಿಸಿ ಪಡೆದಿರುವ ಕಾರ್ಡ್​ಗಳನ್ನು ರದ್ದು ಮಾಡಲಾಗಿದೆ.

ಬೈಕ್, ಟಿವಿ, ಫ್ರಿಡ್ಜ್ ಬಳಕೆದಾರರ ಚೀಟಿ ರದ್ದಿಲ್ಲ

ಬೈಕ್, ಟಿವಿ ಮತ್ತು ಫ್ರಿಡ್ಜ್ ಬಳಸುತ್ತಿರುವ ಕುಟುಂಬಗಳು ಹೊಂದಿರುವ ಬಿಪಿಎಲ್ ಕಾರ್ಡ್ ಗಳನ್ನು ಇಲಾಖೆ ರದ್ದುಪಡಿಸುತ್ತಿಲ್ಲ. ಸರ್ಕಾರ ನಿಗದಪಡಿಸಿದ ಮಾನದಂಡಗಳಲ್ಲಿ ಇವುಗಳನ್ನು ಹೊಂದಲು ಅವಕಾಶವಿದೆ. ಸರ್ಕಾರ ನಿಗದಿಪಡಿಸಿದ ಮಾನದಂಡಗಳ ವಿರುದ್ಧವಾಗಿ ಅನರ್ಹರು ಪಡೆದಿರುವ ಕಾರ್ಡ್​ಗಳನ್ನು ರದ್ದುಪಡಿಸಲಾಗಿದೆ. ಆರ್ಥಿಕ ಸಬಲರು ಪಡೆದಿರುವ ಕಾರ್ಡ್​ಗಳನ್ನು ಸ್ವಯಂ ಇಚ್ಛೆಯಿಂದ ವಾಪಸ್ ನೀಡಬೇಕು. ಇಲ್ಲದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ರೇಷನ್ ಪಡೆದಿರುವ ದಿನದಿಂದ ಈವರೆಗೆ ಪ್ರತಿ ಕೆಜಿ 35 ರೂ.ನಂತೆ ವಸೂಲಿ ಮಾಡಲಾಗುವುದು ಎಂದು ಈ ಹಿಂದೆ ಇಲಾಖೆ ಆದೇಶ ಹೊರಡಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net