

ಬೆಂಗಳೂರು: ವಿಮಾ ಪಾಲಿಸಿ ಮಾಡಿಸುವ ನೆಪದಲ್ಲಿ ಪರಿಚಿತ ವೃದ್ಧೆಯಿಂದ 3.5 ಕೋಟಿ ರೂ. ಪಡೆದು ವಂಚಿಸಿದ್ದ ಖಾಸಗಿ ಬ್ಯಾಂಕ್ ಇಬ್ಬರು ಮಹಿಳಾ ನೌಕರರು ಮತ್ತು ಅವರ ಕುಟುಂಬ ಸದಸ್ಯರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ನಾಗರಬಾವಿಯ ರಾಕೇಶ್, ಆತನ ಪತ್ನಿ ಆರುಂಧತಿ, ಶಿವಮೊಗ್ಗ ಜಿಲ್ಲೆಯ ಆರ್. ವಿಶಾಲಾ ಹಾಗೂ ಆಕೆಯ ಮಗಳು ಅಪೂರ್ವ ಬಂಧಿತರು.1.5 ಕೋಟಿ ರೂ.ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ತಮಗೆ ಪರಿಚಿತ ಪದ್ಮನಾಭನಗರದ ಶಾಂತಾಗೆ (65) ವಿಮೆ ಮಾಡಿಸುವ ನೆಪದಲ್ಲಿ ಬ್ಯಾಂಕ್ ನೌಕರರಾದ ಅಪೂರ್ವ ಮತ್ತು ಆರುಂಧತಿ ವಂಚಿಸಿದ್ದರು. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಕಂಪನಿ ನಿವೃತ್ತ ಉದ್ಯೋಗಿ ಶಾಂತಾ, ಪದ್ಮನಾಭನಗರದಲ್ಲಿ ಮಗಳ ಜತೆ ನೆಲೆಸಿದ್ದಾರೆ. ಅನಾರೋಗ್ಯದಿಂದ ಪತಿ ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಶಾಂತಾಗೆ ಬಸನವಗುಡಿಯ ಖಾಸಗಿ ಬ್ಯಾಂಕ್ ಉದ್ಯೋಗಿಗಳಾದ ಆರುಂಧತಿ ಮತ್ತು ಅಪೂರ್ವ ಪರಿಚಯವಿತ್ತು.
ಅದಕ್ಕಾಗಿ ಹಣಕಾಸು ವ್ಯವಹಾರ ಸಂಬಂಧ ಈ ಇಬ್ಬರ ಜತೆ ವೃದ್ಧೆ ಚರ್ಚಿಸುತ್ತಿದ್ದರು. 2 ವರ್ಷಗಳ ಹಿಂದೆ ಪದ್ಮನಾಭನಗದಲ್ಲಿ ತಮ್ಮ ಮನೆಯನ್ನು 4.5 ಕೋಟಿ ರೂ. ಗೆ ಶಾಂತಾ ಮಾರಾಟಕ್ಕೆ ಇಟ್ಟಿದ್ದರು. ಈ ವಿಷಯ ತಿಳಿದ ಆರುಂಧತಿ ಮತ್ತು ಅಪೂರ್ವ, ಅಜ್ಜಿ ಮನೆ ಮಾರಾಟ ಮಾಡಿಸಿ ಹಣ ದೋಚಲು ಸಂಚು ರೂಪಿಸಿದ್ದರು. ಅಂತೆಯೇ ಆರುಂಧತಿ, ಪತಿ ರಾಕೇಶ್ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದು, ಆತನ ಮೂಲಕವೇ ಅಜ್ಜಿ ಮನೆಯನ್ನು ಮಾರಾಟ ಮಾಡಿಸಿದ್ದರು.
ಅಜ್ಜಿಯ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿತ್ತು. ಈ ಹಣವನ್ನು ದೋಚಲು ಆರೋಪಿಗಳು, ನಿಮ್ಮ ಪತಿಯ ಷೇರುಗಳ ಹಣ ಕೊಡಿಸುತ್ತೇವೆ. ಬ್ಯಾಂಕ್‌ನಲ್ಲಿರುವ ನಿಮ್ಮ ಎಫ್‌ಡಿ ಖಾತೆ ಮುಕ್ತಾಯ ಮಾಡುವಂತೆ ಅಜ್ಜಿಗೆ ಸಲಹೆ ನೀಡಿದ್ದರು. ಈ ಮಾತು ನಂಬಿದ ಶಾಂತಾ ಮೇನಲ್ಲಿ ಕತ್ರಿಗುಪ್ಪೆ ಕೆನರಾ ಬ್ಯಾಂಕ್‌ಗೆ ಕರೆದೊಯ್ದು 1.9 ಕೋಟಿ ರೂ. ಮೊತ್ತದ 2 ಎಫ್‌ಡಿ ಖಾತೆಗಳನ್ನು ಡ್ರಾ ಮಾಡಿದ್ದರು. ಶಾಂತಾ ಅವರಿಂದ 6 ಖಾಲಿ ಚೆಕ್ ಮತ್ತು ಕೆಲ ದಾಖಲೆಗಳಿಗೆ ಸಹಿ ಪಡೆದರು. ಈ ಚೆಕ್‌ಗಳನ್ನು ಆರ್‌ಟಿಜಿಎಸ್ ಮಾಡಿಸಿಕೊಂಡು ಆರೋಪಿಗಳು, ಶಾಂತಾ ಅವರ ಖಾತೆಯಿಂದ 3.5 ಕೋಟಿ ರೂ. ಅನ್ನು ಜೂನ್‌ನಲ್ಲಿ ಅಪೂರ್ವ ತನ್ನ ತಾಯಿ ವಿಶಾಲಾ, ಮಾವ ಸಂಜೀವಪ್ಪ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು.
ಇತ್ತ ಮೊಬೈಲ್‌ಗೆ ಬ್ಯಾಂಕ್‌ನಿಂದ ಎಸ್‌ಎಂಎಸ್ ಬಾರದೆ ಇದ್ದಾಗ ಅನುಮಾನಗೊಂಡ ಶಾಂತಾ, ತಮ್ಮ ಎಫ್‌ಡಿ ಖಾತೆ ಮತ್ತು ವಿಮಾ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ಭೇಟಿಯಾಗಿ ವಿಚಾರಿಸಿದ್ದಾರೆ. ಆಗ ತಮ್ಮ ಬ್ಯಾಂಕ್ ಖಾತೆಯಿಂದ ಬೇರೆ ಖಾತೆಗೆ 3.5 ಕೋಟಿ ರೂ. ಅಕ್ರಮವಾಗಿ ವರ್ಗಾವಣೆ ಆಗಿರುವುದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಬನಶಂಕರಿ ಪೊಲೀಸರಿಗೆ ಶಾಂತಾ ದೂರು ನೀಡಿದ್ದರು. ಇದರ ಮೇರೆಗೆ ತನಿಖೆ ನಡೆಸಿದಾಗ ವಂಚನೆ ಜಾಲ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.