2ಎ ಹೋರಾಟ ಸದ್ಯಕ್ಕೆ ಸ್ಥಗಿತ; ಪಂಚಮಸಾಲಿ ಮೀಸಲು, ಸಿಎಂ ಬೊಮ್ಮಾಯಿ ಸಂಧಾನ ಸಫಲ

2 a
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ಶುಕ್ರವಾರ ಸನ್ಮಾನಿಸಿದರು. ಸಚಿವ ಸಿ.ಸಿ.ಪಾಟೀಲ್ ಇನ್ನಿತರ ಮುಖಂಡರು ಇನ್ನಿತರರು ಇದ್ದರು.
Published on

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗ 2ಎಗೆ ಸೇರಿಸಲು ಒತ್ತಾಯಿಸಿ ನಡೆಸಲು ಉದ್ದೇಶಿಸಿದ್ದ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ ಸಂಧಾನ ಸಫಲವಾಗಿದೆ. ಮುಖ್ಯಮಂತ್ರಿ ಮನವಿಗೆ ಪಂಚಮಸಾಲಿ ಕೂಡಲಸಂಗಮ ಪೀಠಾಧಿಪತಿ ಶ್ರೀ ಬಸವಜಯ ಮೃತ್ಯುಂಜಯ ಸ್ಪಂದಿಸಿ, ಸಮುದಾಯದ ಪ್ರಮುಖರೊಂದಿಗೆ ರ್ಚಚಿಸಿದರು. ಮತ್ತೆ ಹೋರಾಟ ಬೇಡವೆಂಬ ಬೊಮ್ಮಾಯಿ ವಿನಂತಿಗೆ ಸಭೆ ಸಹಮತ ವ್ಯಕ್ತಪಡಿಸಿದೆ. ಅಲ್ಲದೆ, ಸಿಎಂ ಬೊಮ್ಮಾಯಿ ಮೇಲೆ ವಿಶ್ವಾಸವಿರಿಸಿ ಕಾದು ನೋಡುವ ನಿರ್ಧಾರಕ್ಕೆ ಬಂದು, ಚಳವಳಿಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕುವ ನಿರ್ಣಯವನ್ನು ಒಕ್ಕೊರಲಿನಿಂದ ಅಂಗೀಕರಿಸಿದೆ.

ಬೊಮ್ಮಾಯಿ ಮನವೊಲಿಕೆ: ಇದಕ್ಕೂ ಮುಂಚೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಸವರಾಜ ಬೊಮ್ಮಾಯಿ ಅವರು ಸ್ವಾಮೀಜಿ ಮತ್ತಿತರ ಮುಖಂಡರ ಜತೆಗೆ ಸುದೀರ್ಘ ಮಾತುಕತೆ ನಡೆಸಿ, ವಸ್ತುಸ್ಥಿತಿ ವಿವರಿಸಿ ಮನವೊಲಿಸಿದರು. ಸಮುದಾಯದ ಬೇಡಿಕೆ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕ ನಿಲುವು ಹೊಂದಿದೆ. ಆದರೆ ಕಾನೂನಿನ ತೊಡಕು ಎದುರಾಗದಂತೆ ಕ್ರಮ ವಹಿಸಬೇಕಾಗಿದ್ದು, ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಅಂತಿಮ ವರದಿ ಸಲ್ಲಿಸಿದ ತಕ್ಷಣ ಮುಂದಿನ ಹೆಜ್ಜೆಯಿಡಲಾಗುವುದು. ಸಮಯದಾಯದ ಶಿಕ್ಷಣ, ಉದ್ಯೋಗದ ಸ್ಥಿತಿಗತಿ ಕುರಿತು ಆಯೋಗ ದತ್ತಾಂಶ ಸಂಗ್ರಹಿಸುತ್ತಿದ್ದು, ಈ ಅಂಶಗಳ ಆಧಾರದ ಮೇಲೆ ಆಯೋಗ ವರದಿ ಸಲ್ಲಿಸಲಿದೆ. ನಿರ್ದಿಷ್ಟ ದತ್ತಾಂಶಗಳಿಲ್ಲದೆ ಮಹಾರಾಷ್ಟ್ರ ಸರ್ಕಾರ ಮರಾಠ ಸಮುದಾಯಕ್ಕೆ ನೀಡಿದ ಮೀಸಲು ಸೌಲಭ್ಯವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು. ರಾಜ್ಯದಲ್ಲೂ ಇದೇ ಪರಿಸ್ಥಿತಿ ಮರುಕಳಿಸಬಾರದು ಎನ್ನುವುದು ಸರ್ಕಾರದ ನಿಲುವಾಗಿದೆ ಎಂದು ವಾಸ್ತವಿಕ ಸಂಗತಿಯನ್ನು ಮನದಟ್ಟು ಮಾಡಿಕೊಟ್ಟ ಬೊಮ್ಮಾಯಿ, ಎಲ್ಲ ಆಯಾಮಗಳಲ್ಲಿ ಯೋಚಿಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಮತ್ತೆ ಹೋರಾಟಕ್ಕೆ ಇಳಿಯಬೇಡಿ ಎಂದು ಸ್ವಾಮೀಜಿಗೆ ಮನವಿ ಕೊಂಡರು. ಸಿಎಂ ಮನವಿಗೆ ಸ್ವಾಮೀಜಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜತೆಗೆ ಸರ್ಕಾರದ ನಿಲುವಿನ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಂಘಟನೆಯ ಮುಖಂಡರ ಜತೆಗೆ ರ್ಚಚಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಚಿನ್ನದ ಮಠ ಕಟ್ಟುತ್ತಿದ್ದೆ: ಅನುದಾನ ಪಡೆದು ಮಠ ಕಟ್ಟುವ ಉದ್ದೇಶವಿದ್ದಿದ್ದರೆ, ಚಿನ್ನದ ಮಠ ಕಟ್ಟುತ್ತಿದ್ದೆ. ಆದರೆ ಸಮುದಾಯಕ್ಕೆ ಒಳಿತು ಮಾಡಬೇಕು ಎನ್ನುವುದು ನನ್ನ ಉದ್ದೇಶ. ಮಾಜಿ ಸಚಿವ ವಿನಯ್ ಕುಲಕರ್ಣಿ ಅನುದಾನ ಬೇಕಾ? ಎಂದು ಕೇಳಿದ್ದರು. ನಾನು ಯಾವತ್ತು ಅನುದಾನ ಕೇಳಿಲ್ಲ, ಮೀಸಲು ಸೌಲಭ್ಯ ಬೇಕು. ಅದಕ್ಕಾಗಿ ನಿರಂತರ ಹೋರಾಟ ಮಾಡೋಣವೆಂದಿದ್ದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಮೂರು ತಿಂಗಳ ಗಡುವು: ಸಿಎಂ ಜತೆಗಿನ ಮಾತುಕತೆ, ಭಾರತೀಯ ವಿದ್ಯಾಭವನದಲ್ಲಿ ಸಮುದಾಯದ ಪ್ರಮುಖರ ಜತೆ ಸಭೆ ನಡೆಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸರ್ಕಾರಕ್ಕೆ 3 ತಿಂಗಳ ಗಡುವು ನೀಡಿ ಶುಕ್ರವಾರದಿಂದ ಆರಂಭಿಸಲು ಉದ್ದೇಶಿಸಿದ್ದ ಚಳವಳಿಯನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯಕ್ಕೆ 2ಎ ಮೀಸಲಾತಿ ಆರು ತಿಂಗಳಲ್ಲಿ ನೀಡದಿದ್ದರೆ ಅ.1ರಿಂದ ಮತ್ತೆ ಹೋರಾಟಕ್ಕೆ ಇಳಿಯಲು ತೀರ್ವನಿಸಿದ್ದೆವು. ದಾವಣಗೆರೆಯಲ್ಲಿ ಗುರುವಾರ ನಡೆದ ಸಮಾವೇಶ ನೋಡಿ ಸರ್ಕಾರ ಬೆಚ್ಚಿದೆ. ಮುಖ್ಯಮಂತ್ರಿ ಆಹ್ವಾನಿಸಿ ಒಂದೂವರೆ ತಾಸು ಮಾತುಕತೆ ನಡೆಸಿದರು. ಕಾನೂನಿನ ತೊಡಕು ಉಂಟಾಗಬಾರದೆಂಬ ಕಾರಣಕ್ಕೆ ಸಿಎಂ ಕಾಲಾವಕಾಶ ಕೋರಿದ್ದಾರೆ. ನಿಗದಿತ ಗಡುವಿನೊಳಗೆ ಈ ಸೌಲಭ್ಯ ಒದಗಿಸದಿದ್ದರೆ ಬೆಂಗಳೂರಿನಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದು ಸ್ವಾಮೀಜಿ ಎಚ್ಚರಿಸಿದರು. ಚಳವಳಿ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದರೂ ಗ್ರಾಮ, ತಾಲೂಕು ಮಟ್ಟದಲ್ಲಿ ಮೀಸಲಾತಿ ಜಾಗೃತಿ ಅಭಿಯಾನ ಮುಂದುವರಿಯಲಿದೆ. ಆಹ್ವಾನಿಸಿ ಮಾತುಕತೆ ನಡೆಸಿರುವುದನ್ನು ಗಮನಿಸಿದರೆ ನಮ್ಮ ಬೇಡಿಕೆಯನ್ನು ಬೊಮ್ಮಾಯಿ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ವೇದ್ಯವಾಗುತ್ತಿದ್ದು, ಇನ್ನು ಮುಂದಿನ ಹಂತದ ಜವಾಬ್ದಾರಿಯನ್ನು ಸಚಿವ ಸಿ.ಸಿ.ಪಾಟೀಲ್​ರಿಗೆ ನೀಡಲಾಗಿದೆ ಎಂದರು. ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆಗಳು ಬಂದಿವೆ. ಪಂಚಮಸಾಲಿ ಸಮುದಾಯ ಎದುರು ಹಾಕಿಕೊಳ್ಳುವುದು ಬೇಡವೆಂಬುದನ್ನು ಬೊಮ್ಮಾಯಿಗೆ ತಿಳಿದಿದ್ದು, ಬೇಡಿಕೆ ಈಡೇರಿಸಲು ಹೆಚ್ಚಿನ ವಿಳಂಬ ಮಾಡಲಾರರು ಎನ್ನುವ ವಿಶ್ವಾಸವಿದೆ ಎಂದು ಸ್ವಾಮೀಜಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net