

ಸೊರಬ: ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ನಮ್ಮ ಸರ್ಕಾರ ಸಫಲವಾಗಿದೆ. ಕೋಟ್ಯಂತರ ರೂ. ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಜಡೆ ಗ್ರಾಪಂ ವ್ಯಾಪ್ತಿಯ ತಲಗದ್ದೆ ಗ್ರಾಮದಲ್ಲಿ ಬಾಕ್ಸ್ ಚರಂಡಿ ಕಾಮಗಾರಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ವಿಪಕ್ಷದವರು ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಆರೋಪಿಸುತ್ತಿದ್ದಾರೆ. ಇದಕ್ಕೆ ಉತ್ತರವಾಗಿ ಸೊರಬ ಕ್ಷೇತ್ರಕ್ಕೆ 299 ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ. ಪ್ರತಿ ಗ್ರಾಮಗಳ ಕಾಮಗಾರಿಗೆ ಹಣ ಬಿಡುಗಡೆ ಮಾಡಿಸಿಕೊಂಡೇ ಭೇಟಿ ನೀಡುತ್ತೇನೆ ಎಂದರು.
ಸರ್ಕಾರದ ಯೋಜನೆಗಳ ಕಾಮಗಾರಿ ನಡೆಯುವಾಗ ಅನಾವಶ್ಯಕ ತೊಂದರೆ ಕೊಡುವವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳು ಗುಣಮಟ್ಟದ ಕಾರ್ಯಗಳಿಗೆ ಒತ್ತು ನೀಡುವ ಜತೆಗೆ ಯಾರಿಗೂ ಅಂಜದೆ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುವಂತೆ ಸೂಚಿಸಿದರು.
ಬಡವರ ಮಕ್ಕಳು ಕೂಡ ಉತ್ತಮ ಶಿಕ್ಷಣ ಪಡೆದು ಉತ್ತಮ ಜೀವನ ನಡೆಸಲು ಅವಕಾಶ ನೀಡಿ ಶಿಕ್ಷಣ ಇಲಾಖೆಯಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬಿಜೆಪಿ ಅವಧಿಯಲ್ಲಿ ಮಾಡಿದ 37 ಸಾವಿರ ಕೋಟಿ ರೂ. ಸಾಲವನ್ನು ತೀರಿಸಿದ್ದೇವೆ. ಇದರ ನಡುವೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಂಡು ಅಭಿವೃದ್ಧಿ ಕಾರ್ಯಗಳಿಗೂ ಬಿಡುಗಡೆ ಮಾಡಲಾಗುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರಿಬಸಮ್ಮ, ಉಪಾಧ್ಯಕ್ಷ ಆರ್.ಟಿ.ಮಂಜುನಾಥ್, ಶಹಜಾದ್, ಸೈಫುಲ್ಲಾ ಖಾನ್, ಕೆ.ಪಿ.ರುದ್ರಗೌಡ, ಸದಾನಂದ ಗೌಡ, ಶಿವಲಿಂಗೇಗೌಡ, ರಾಜು, ಗಣೇಶಪ್ಪ ಜಾಧವ್, ಮುಡುಪಣ್ಣ, ರುದ್ರಪ್ಪ, ಪ್ರದೀಪ್‌ಕುಮಾರ್, ಪುಷ್ಪಾ, ನಾಗರಾಜ್, ಅನ್ವೇಕರ್ ಇತರರಿದ್ದರು.