ತೆಲಂಗಾಣದಲ್ಲಿ ಹೆಚ್ಚಿದ ಹಕ್ಕಿ ಜ್ವರ ಭೀತಿ! 29,796ಕ್ಕೂ ಅಧಿಕ ಕೋಳಿಗಳು ಸಾವು | Bird flu

ವಿಜಯವಾಣಿ (49)
Published on

Bird flu: ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಹಕ್ಕಿ ಜ್ವರ ಪತ್ತೆಯಾದ ಬೆನ್ನಲ್ಲೇ ಅಧಿಕಾರಿಗಳು ಹೈಅಲರ್ಟ್​ ಆಗಿದ್ದಾರೆ. ಇಷ್ಟಾದರೂ ಸಹ ಹಕ್ಕಿ ಜ್ವರದ ಹಾವಳಿ ಕಡಿಮೆಯಾಗಿಲ್ಲ. ಸಾವಿರಾರು ಕೋಳಿಗಳು ಮೃತಪಟ್ಟಿವೆ. ಕಳೆದ ತಿಂಗಳು ಹಕ್ಕಿ ಜ್ವರ ಕಾಣಿಸಿಕೊಂಡಿದ್ದರಿಂದ ತೆಲಂಗಾಣ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿತ್ತು. ದೋಷಪೂರಿತ ಫಾರ್ಮ್‌ಗಳ ಮಾಲೀಕರು ಮತ್ತು ಸಾರ್ವಜನಿಕರಿಗೆ ಹಕ್ಕಿ ಜ್ವರಕ್ಕೆ ತುತ್ತಾಗದಂತೆ ಮುನ್ನೆಚ್ಚರಿಕೆ ಕೊಡಲಾಗಿತ್ತು. ಈ ವೇಳೆ ಕೋಳಿ ಮಾರಾಟ ತೀವ್ರ ಕುಸಿತ ಕಂಡಿತ್ತು. ಜನ ಕೋಳಿ ಮಾಂಸವನ್ನು ಖರೀದಿಸಲು ಹಿಂದೆ-ಮುಂದೆ ಯೋಚಿಸುತ್ತಿದ್ದರು. ಆದಾಗ್ಯೂ, ಕೆಲವೇ ದಿನಗಳಲ್ಲಿ ಹಕ್ಕಿ ಜ್ವರದ ಪರಿಣಾಮ ಕಡಿಮೆಯಾಯಿತು. ಆದ್ರೆ, ಇದೀಗ ಮತ್ತೆ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಹಕ್ಕಿ ಜ್ವರ ದೃಢ

ಯಾದಾದ್ರಿ ಜಿಲ್ಲೆಯಲ್ಲಿ ಮತ್ತೊಮ್ಮೆ ಹಕ್ಕಿ ಜ್ವರದ ಭೀತಿ ಜನರನ್ನು ಆವರಿಸಿದ್ದು, ಮತ್ತಷ್ಟು ಭಯದ ಭೀತಿಗೆ ದೂಡಿದೆ. ಭೂದಾನ್ ಪೋಚಂಪಲ್ಲಿ ಮಂಡಲದ ಧೋಟಿಗುಡೆಮ್‌ನಲ್ಲಿರುವ ಕೋಳಿ ಫಾರ್ಮ್‌ನಲ್ಲಿ ಇತ್ತೀಚೆಗೆ ನೂರಾರು ಕೋಳಿಗಳು ಸಾವನ್ನಪ್ಪಿವೆ. ಈ ವಿಷಯ ತಿಳಿದ ಬೆನ್ನಲ್ಲೇ ಪಶುವೈದ್ಯಕೀಯ ಅಧಿಕಾರಿಗಳು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ, ಈ ಮಾದರಿ ಹಕ್ಕಿ ಜ್ವರ ಎಂಬುದನ್ನು ದೃಢಪಡಿಸಿದೆ. ಇದರೊಂದಿಗೆ, ಜಿಲ್ಲಾ ಪಶುಸಂಗೋಪನಾ ಅಧಿಕಾರಿ ಜನಯ್ಯ ಮತ್ತು ಇತರ 30 ವೈದ್ಯರ ತಂಡ ಕೋಳಿ ಫಾರ್ಮ್‌ಗೆ ತಲುಪಿ, ಪರಿಶೀಲನೆ ನಡೆಸಿದ್ದಾರೆ.

29,796 ಕೋಳಿ, 20,000 ಮೊಟ್ಟೆ

ಪಿಪಿಇ ಕಿಟ್‌ಗಳು ಮತ್ತು ಮುಖಗವಸನ್ನು ಧರಿಸಿದ ವೈದ್ಯರು ಮತ್ತು ಸಿಬ್ಬಂದಿ, ಮೃತಪಟ್ಟ ಕೋಳಿಗಳ ಫಾರ್ಮ್‌ಗೆ ತೆರಳಿ ಒಟ್ಟು 29,796 ಕೋಳಿಗಳನ್ನು ಕೊಂದು ಚೀಲಗಳಲ್ಲಿ ಮೂಟೆ ಕಟ್ಟಿ, ಗುಂಡಿಯೊಳಗೆ ಹೂತ್ತಿದ್ದಾರೆ. ಫಾರ್ಮ್‌ನಿಂದ ಸುಮಾರು 20,000 ಕೋಳಿ ಮೊಟ್ಟೆಗಳು ಮತ್ತು ಕೋಳಿ ತ್ಯಾಜ್ಯವನ್ನು ಸಹ ಮುಚ್ಚಿ ಹಾಕಿದ್ದಾರೆ. ಅಧಿಕಾರಿಗಳು ಕೋಳಿ ಫಾರ್ಮ್ ಮಾಲೀಕರಿಗೆ ಪ್ರತಿ ಹದಿನೈದು ದಿನಗಳಿಗೊಮ್ಮೆ ಫಾರ್ಮ್ ಅನ್ನು ಸ್ವಚ್ಛಗೊಳಿಸುವಂತೆ ಮತ್ತು ಮೂರು ತಿಂಗಳ ಕಾಲ ಕೋಳಿಗಳನ್ನು ಸಾಕಬಾರದು ಎಂದು ಸೂಚಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net