ಆರ್​ಸಿಬಿ-ಕೆಕೆಆರ್​ ಶುಭಾರಂಭ ಪಂದ್ಯಕ್ಕೆ ಮಳೆ ಭೀತಿ! ವರುಣ ಸುರಿದರೆ ಹೀಗಿರಲಿದೆ ಫಲಿತಾಂಶ ನಿರ್ಧಾರ | IPL 2025

ವಿಜಯವಾಣಿ (47)
Published on

IPL 2025: ಇಂದು ಐಪಿಎಲ್‌ 18ನೇ ಆವೃತ್ತಿಗೆ ಅಧಿಕೃತ ಚಾಲನೆ ಸಿಗಲಿದ್ದು, ಮೊದಲ ಹಾಗೂ ಶುಭಾರಂಭ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಮತ್ತು ಕಳೆದ ಬಾರಿಯ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ಕೋಲ್ಕತ ನೈಟ್​ ರೈಡರ್ಸ್​ ತಂಡಗಳು ಮುಖಾಮುಖಿಯಾಗಿ ಸೆಣಸಲಿವೆ. ಐಪಿಎಲ್​ ಖದರ್​ ಶುರುವಿನ ಬೆನ್ನಲ್ಲೇ ಕೆಕೆಆರ್​-ಆರ್​ಸಿಬಿ ಪಂದ್ಯಕ್ಕೆ ಮಳೆ ಭೀತಿ ಎದುರಾಗಿರುವುದು ಸದ್ಯ ಕ್ರಿಕೆಟ್ ಅಭಿಮಾನಿಗಳ ಆತಂಕ, ಗೊಂದಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಎಂದಿನಂತೆ ಸಾರಿಗೆ ಸಂಚಾರ ಆರಂಭ; ಬಸ್​ ತಡೆದು ಕನ್ನಡಪರ ಸಂಘಟನೆಗಳು ಆಕ್ರೋಶ | Karnataka Bandh ಆರ್​ಸಿಬಿ ಮತ್ತು ಕೆಕೆಆರ್​ ಪಂದ್ಯದ ಮೂಲಕ ಐಪಿಎಲ್ 2025ರ ಲೀಗ್​ ನೋಡುವ ತವಕದಲ್ಲಿ ಅಭಿಮಾನಿಗಳು ಕಾತರದಿಂದ ಕಾಯತೊಡಗಿದ್ದಾರೆ. ಆದರೆ, ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಮುನ್ಸೂಚನೆಗಳಿವೆ. ಕೋಲ್ಕತ್ತಾದಲ್ಲಿ ಹವಾಮಾನ ಬದಲಾವಣೆಗಳು ಉಂಟಾಗಲಿದ್ದು, ಮಳೆ ಸುರಿಯುವ ಮುನ್ಸೂಚನೆ ಇದೆ. ಇದು ಈಡನ್ ಗಾರ್ಡನ್ಸ್‌ನಲ್ಲಿ ಕಿಕ್ಕಿರಿದು ಸೇರಲಿರುವ ಅಭಿಮಾನಿಗಳ ಉತ್ಸಾಹವನ್ನು ಕುಗ್ಗಿಸುವ ಸಾಧ್ಯತೆಗಳಿವೆ.  ಆಯೋಜಕರು ಹವಾಮಾನ ವರದಿಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಐಪಿಎಲ್​ 2025ರ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್​ನ ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್, ರ‍್ಯಾಪರ್ ಕರಣ್ ಔಜ್ಲಾ ಮತ್ತು ಬಾಲಿವುಡ್ ತಾರೆ ದಿಶಾ ಪಟಾನಿ ಭಾಗವಹಿಸುವ ಮೂಲಕ ಐಪಿಎಲ್​ ವೇದಿಕೆಯ ಮೆರುಗು ಹೆಚ್ಚಿಸಲು ಸಜ್ಜಾಗಿದ್ದಾರೆ. ಮಳೆ ಬಂದರೆ ಇದೆಲ್ಲದಕ್ಕೂ ಬ್ರೇಕ್ ಬೀಳಲಿದೆ ಎಂಬುದು ಇಲ್ಲಿ ಗಮನಾರ್ಹ. ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಿ 35 ನಿಮಿಷಗಳ ಕಾಲ ನಡೆಯಲಿದ್ದು, ನಂತರ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಪ್ರಕ್ರಿಯೆ ಜರುಗಲಿದೆ.

ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಏನು ಕಥೆ?

ಆರಂಭಿಕ ಪಂದ್ಯ ಸೇರಿದಂತೆ ಗ್ರೂಪ್ ಸ್ಟೇಜ್​ ಪಂದ್ಯಗಳಿಗೆ ಯಾವುದೇ ಮೀಸಲು ದಿನಗಳಿಲ್ಲ. ಆದಾಗ್ಯೂ, ನಿಗದಿತ ಮುಕ್ತಾಯ ಸಮಯಕ್ಕಿಂತ 60 ನಿಮಿಷಗಳವರೆಗೆ ಆಟವನ್ನು ವಿಸ್ತರಿಸಬಹುದು. ಫಲಿತಾಂಶವನ್ನು ನೀಡಲು ಪ್ರತಿ ತಂಡಕ್ಕೆ ಕನಿಷ್ಠ ಐದು ಓವರ್‌ಗಳ ಅಗತ್ಯವಿದೆ.ಐದು ಓವರ್‌ಗಳ ಪಂದ್ಯಕ್ಕೆ ಕಟ್-ಆಫ್ ಸಮಯ ಭಾರತೀಯ ಕಾಲಮಾನ ರಾತ್ರಿ 10:56. ಮತ್ತು ಪಂದ್ಯವನ್ನು ಭಾರತೀಯ ಕಾಲಮಾನ ಬೆಳಗ್ಗೆ 12:06ಕ್ಕೆ (ಅಂದರೆ ಮರುದಿನ) ಮುಕ್ತಾಯಗೊಳಿಸಬೇಕಾಗುತ್ತದೆ. ಮಳೆಯಿಂದ ಉಂಟಾಗುವ ವಿಳಂಬದ ಅವಧಿಯನ್ನು ಆಧರಿಸಿ ಓವರ್‌ಗಳನ್ನು ಕಡಿತಗೊಳಿಸಲಾಗುತ್ತದೆ. ಒಟ್ಟಾರೆ ಇಂದಿನ ಶುಭಾರಂಭ ಪಂದ್ಯಕ್ಕೆ ವರುಣನ ಆರ್ಭಟ ಕಾಡಬಾರದು ಎಂದು ಅಭಿಮಾನಿಗಳು ಬಯಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net