ತಂದೆಯೇ ಅವರನ್ನು ಕ್ಷಮಿಸು

jesus
Published on

‘ನಾನು ನನ್ನ ಪತಿಯ ಹಂತಕನನ್ನು ಹೃದಯಾಂತರಾಳದಿಂದ ಕ್ಷಮಿಸುತ್ತೇನೆ. ಏಕೆಂದರೆ ಪ್ರಭು ಯೇಸು ಕ್ರಿಸ್ತರು, ದ್ವೇಷಕ್ಕೆ ದ್ವೇಷ ಉತ್ತರವಲ್ಲ, ಬದಲಾಗಿ ಕ್ಷಮೆ ಮತ್ತು ಪ್ರೀತಿ ಎಂದು ಬೋಧಿಸಿದ್ದಾರೆ’- ಕೆಲ ದಿನಗಳ ಹಿಂದೆ ಒಬ್ಬ ಯುವಕನ ಗುಂಡಿಗೆ ಬಲಿಯಾದ 31 ವರ್ಷದ ಅಮೆರಿಕಾದ ಚಾರ್ಲಿ ಕರ್ಕ್ ಅವರ ಪತ್ನಿ ಎರಿಕಾ ಕರ್ಕ್ ಅವರು ಶೋಕ ಸಭೆಯಲ್ಲಿ ನುಡಿದ ಆಧ್ಯಾತ್ಮಿಕ ಮಾತುಗಳಿವು. ಎರಡು ಸಾವಿರ ವರ್ಷಗಳ ಹಿಂದೆ ಯೇಸು ಕ್ರಿಸ್ತರು ಹೇಳಿದ ಮಾತುಗಳು ಪ್ರತಿಧ್ವನಿಸಿದ ಘಟನೆ ಇದು. ಕ್ಷಮಿಸುವುದು ಮತ್ತು ಪ್ರೀತಿಸುವುದು ಸುಲಭವಲ್ಲ. ಅದರಲ್ಲೂ ಪತಿಯನ್ನು ಕೊಂದವನನ್ನು ಕ್ಷಮಿಸುವುದು ಕಷ್ಟಸಾಧ್ಯ. ಆದರೆ ‘ಪ್ರಭು ಕ್ರಿಸ್ತನ ಅನುಯಾಯಿಯಾಗಿ ನಾನು ಆತನನ್ನು ಕ್ಷಮಿಸಿದ್ದೇನೆ’ ಎಂದ ಮಹಾತಾಯಿ ಎರಿಕಾ ಕರ್ಕ್.

ಇನ್ನೊಂದು ಘಟನೆ: 1999 ರಲ್ಲಿ ಒರಿಸ್ಸಾದ ಮನೋಹರಪುರದಲ್ಲಿ ಅಸ್ಟ್ರೇಲಿಯಾದ ಮಿಷನರಿ ಗ್ರಹಾಂ ಸ್ಟೇಯ್ನ್​​ ಹಾಗೂ ಅವರ ಇಬ್ಬರು ಮುಗ್ಧ ಪುತ್ರರು ವಾಹನದಲ್ಲಿ ರಾತ್ರಿ ಮಲಗಿದ್ದ ವೇಳೆ ಅವರನ್ನು ಸುಟ್ಟು ಕೊಲೆಗೈದ ಆರೋಪಿಗಳನ್ನು ಕ್ಷಮಿಸಿ ಗ್ರಹಾಂ ಅವರ ಪತ್ನಿ ಗ್ಲ್ಯಾಡಿಸ್​ ಸ್ಟೇಯ್ನ್ ‘ಪ್ರೀತಿ ಮತ್ತು ಕ್ಷಮೆ ಮಾತ್ರ ಇಂತಹ ಹಿಂಸೆ ಮತ್ತು ದ್ವೇಷವನ್ನು ಗುಣಪಡಿಸಬಲ್ಲವು’ ಎಂದಿದ್ದರು. 1995ರಲ್ಲಿ ಮಧ್ಯ ಪ್ರದೇಶದ ಇಂದೋರ್​ನಲ್ಲಿ ಸಿಸ್ಟರ್ ರಾಣಿ ಮರಿಯಾ ಅವರನ್ನು 40 ಬಾರಿ ಇರಿದು ಕೊಲೆಗೈದ ಸಮಂದರ್ ಸಿಂಗ್ ಅವರಿಗೆ ಮರಿಯಾ ಅವರ ತಂಗಿ ಸಿಸ್ಟರ್ ಸೆಲ್ಮಿ ಜೈಲಿಗೆ ಹೋಗಿ ಸಮುಂದರ್​ಗೆ ರಾಖಿ ಕಟ್ಟಿ, ನೀನು ನನ್ನ ಅಣ್ಣ ಎಂದು ಸ್ವೀಕರಿಸಿ, ಮನೆಗೆ ಕರೆದುಕೊಂಡು ಹೋಗಿ ಸತ್ಕರಿಸಿ ಅವರನ್ನು ಕ್ಷಮಿಸುತ್ತಾರೆ.

ದ್ವೇಷದ, ಸಂಶಯದ, ಅಸಹಿಷ್ಣುತೆಯ, ವಿಭಜನೆಯ, ಹಿಂಸೆಯ ಯುಗದಲ್ಲಿರುವ ನಮಗೆ ಈ ನೈಜ ಘಟನೆಗಳು ಸಹಬಾಳ್ವೆಗೆ ಪ್ರೇರಣೆಯಾಗಲಿ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಗಳನ್ನು ತೆರೆಯಲು, ಹಿಂಸೆ- ಪ್ರತೀಕಾರದ ಮನಗಳಲ್ಲಿ ಕ್ಷಮೆಯ ಬೀಜ ಬಿತ್ತಲು ಪ್ರೇರಣೆಯಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net