ಕೆಜಿ ತಂಬಾಕಿಗೆ 290 ರೂ. ದರ ನಿಗದಿಪಡಿಸಿ

HUN-OCT-5-1(MEMORENDUM BY FARMERS)
Published on

ಹುಣಸೂರು: ಆಂಧ್ರಪ್ರದೇಶದ ತಂಬಾಕು ಮಾರುಕಟ್ಟೆಯಲ್ಲಿ ಕೆಜಿ ತಂಬಾಕಿಗೆ 290 ರೂ.ಗಳನ್ನು ನೀಡುತ್ತಿದ್ದು, ಕರ್ನಾಟಕದ ರೈತರಿಗೂ ಇದೇ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ರೈತ ಸಂ ಮತ್ತು ತಂಬಾಕು ಬೆಳೆಗಾರರ ಹಿತರಕ್ಷಣಾ ಸಮಿತಿ ಸದಸ್ಯರು ತಂಬಾಕು ಮಂಡಳಿ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.

ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಹರಾಜು ಅಧೀಕ್ಷಕ ಧನರಾಜ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಆಂಧ್ರಪ್ರದೇಶದ ಮಾರುಕಟ್ಟೆ ಇದೀಗ ಸಂಪನ್ನಗೊಂಡಿದೆ. ಕಳೆದ ಎರಡು ತಿಂಗಳಿನಿಂದಲೂ ಖರೀದಿದಾರರು ಆಂಧ್ರದಲ್ಲಿ ಕೆಜಿ ತಂಬಾಕಿಗೆ 290 ರೂ. ನೀಡಿ ಖರೀದಿಸಿದ್ದಾರೆ. ಆದರೆ ರಾಜ್ಯದಲ್ಲಿ ಕಳೆದ ವಾರ ಆರಂಭಗೊಂಡ ಮಾರುಕಟ್ಟೆಯಲ್ಲಿ ಕೆಜಿಗೆ 230 ರೂ. ನೀಡಿದ್ದಾರೆ. ಆ ಮೂಲಕ ಕರ್ನಾಟಕದ ರೈತರಿಗೆ ಖರೀದಿ ಕಂಪನಿಗಳು ಅನ್ಯಾಯವೆಸಗಿವೆ. ತಂಬಾಕು ಮಂಡಳಿಯು ಖರೀದಿದಾರರೊಂದಿಗೆ ಚರ್ಚಿಸಿ ಕೂಡಲೇ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ ಕೆಜಿಗೆ 290 ರೂ.ಗಳನ್ನು ನೀಡಬೇಕು. ಒಂದು ವಾರದೊಳಗೆ ಈ ಪ್ರಕ್ರಿಯೆ ನಡೆಯದಿದ್ದಲ್ಲಿ ರೈತ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಂಬಾಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ, ಗೌರವಾಧ್ಯಕ್ಷ ಉಂಡುವಾಡಿ ಚಂದ್ರೇಗೌಡ, ಅಗ್ರಹಾರ ರಾಮೇಗೌಡ, ಕಟ್ಟೆಮಳಲವಾಡಿ ಮಹದೇವ, ಅಗ್ರಹಾರ ಸತೀಶ, ಕಟ್ಟೆಮಳಲವಾಡಿ ರವಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net