

ಮಹಾಭಾರತದ ಯುದ್ಧ ಮುಗಿದು, ವಿಜಯಿಗಳಾದ ಪಾಂಡವರ ರಾಜ್ಯಭಾರದ ಕಾಲದಲ್ಲಿ ನಡೆದ ಘಟನೆಯಿದು. ಪಾಂಡವರಲ್ಲಿ ಹಿರಿಯವನಾದ ಧರ್ಮರಾಯನು ಪಟ್ಟಾಭಿಷಕ್ತನಾಗಿ ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ಸಹೋದರರಾದ ಭೀಮಾರ್ಜುನ, ನಕುಲ, ಸಹದೇವರ ಸಹಾಯದಿಂದ ರಾಜ್ಯಭಾರ ನಡೆಸುತ್ತಿದ್ದ. ಮಗ ದುರ್ಯೋಧನನ ಅಧಿಕಾರಲಾಲಸೆ, ಹಠಮಾರಿತನ ಮತ್ತು ದುರಹಂಕಾರಗಳಿಂದ, ಮಹಾಭಾರತ ಯುದ್ಧವೇ ನಡೆದುಹೋಗಿ, ತನ್ನ ಎಲ್ಲ ನೂರು ಮಕ್ಕಳು ಸಾವನ್ನಪ್ಪಿದರೂ, ಧೃತರಾಷ್ಟ್ರನ ಕಣ್ಣು ಮಾತ್ರ ತೆರೆದಿರಲಿಲ್ಲ; ಅವನಿಗೆ ಇನ್ನೂ ಜ್ಞಾನೋದಯವಾಗಿರಲಿಲ್ಲ. ಇಷ್ಟಾದರೂ ಅವನಲ್ಲಿ ಇನ್ನೂ ಪಶ್ಚಾತಾಪದ, ವೈರಾಗ್ಯದ ಭಾವ ಮೂಡಿರಲಿಲ್ಲ. ರಾಜವೈಭವವನ್ನು ತೊರೆದು ಅರಣ್ಯದಲ್ಲಿ ನೆಲೆಸುವ ಮನೋಭಾವ ಅವನಿಗಿನ್ನೂ ಬಂದಿರಲಿಲ್ಲ. ಧರ್ಮರಾಯನಿಂದ ರಾಜೋಪಚಾರ ಪಡೆಯುತ್ತ, ಇನ್ನೂ ಸುಖಭೋಗಗಳನ್ನು ಅನುಭವಿಸುವುದರಲ್ಲೇ ಮಗ್ನನಾಗಿದ್ದ. ಕೊನೆಗೂ ವಿದುರನ ಉಪದೇಶ ಹಾಗೂ ಭೀಮಸೇನ ಹೂಡಿದ ತಂತ್ರದ ಪರಿಣಾಮವಾಗಿ ಎಚ್ಚೆತ್ತುಕೊಂಡು ಎಲ್ಲ ರಾಜವೈಭೋಗಗಳನ್ನು ತ್ಯಜಿಸಿ, ಹಿಂದಿನ ರಾಜಋಷಿಗಳ ಪರಂಪರೆಯಂತೆ, ಅರಣ್ಯಕ್ಕೆ ಹೊರಡಲು ಅಣಿಯಾದ.
ಹೊರಡುವ ಮುನ್ನ ದುರ್ಯೋಧನ-ದುಶ್ಯಾಸನಾದಿಯಾಗಿ, ಯುದ್ಧದಲ್ಲಿ ಮಡಿದ ತನ್ನ ಮಕ್ಕಳಿಗೆ ಕೊನೆಯ ಬಾರಿ ವೈಭವದಿಂದ ಶ್ರಾದ್ಧವನ್ನಾದರೂ ನಡೆಸಬೇಕೆಂಬ ಅಭಿಲಾಷೆ ಅವನಿಗುಂಟಾಯಿತು. ಅದಕ್ಕೆ ಬೇಕಾದ ಹಣವನ್ನು ನೀಡುವಂತೆ ಧರ್ಮರಾಯನನ್ನು ಕೇಳಿದ. ಕರುಣಾಳು ಧರ್ಮರಾಯ ಭೀಮನನ್ನು ಕರೆದು ರಾಜ್ಯದ ಬೊಕ್ಕಸದಿಂದ ಧೃತರಾಷ್ಟ್ರನಿಗೆ ತನ್ನ ಮಕ್ಕಳ ಶ್ರಾದ್ಧವಿಧಿ ನೆರವೇರಿಸಲು ಬೇಕಾದ ದ್ರವ್ಯವನ್ನು ಕೊಡುವಂತೆ ಸೂಚಿಸಿದ. ಆದರೆ ಭೀಮಸೇನ ಆ ಹಣವನ್ನು ನೀಡಲು ಒಪ್ಪಲಿಲ್ಲ. ಇದು ಅರಣ್ಯದತ್ತ ಹೊರಟಿರುವ ಧೃತರಾಷ್ಟ್ರನ ಕೊನೆಯ ಬೇಡಿಕೆ; ಕೊಟ್ಟುಬಿಡೋಣವೆಂದು ಪರಿಪರಿಯಾಗಿ ಧರ್ಮರಾಯ ಹೇಳಿದರೂ ಭೀಮಸೇನ ಮಾತ್ರ ಸಮ್ಮತಿಸಲಿಲ್ಲ. ಕಾರಣವನ್ನು ಕೇಳಲಾಗಿ, ಭೀಮಸೇನನೆಂದ- ‘ರಾಜ್ಯದ ಬೊಕ್ಕಸದಲ್ಲಿರುವ ಹಣ ನಾವ್ಯಾರು ಗಳಿಸಿದ ಸ್ವಅರ್ಜಿತ ಹಣವಲ್ಲ. ಪ್ರಜೆಗಳು ತೆತ್ತ ತೆರಿಗೆಯಿಂದ ಸಂಗ್ರಹವಾದುದು. ಆದುದರಿಂದ ಅದು ಮತ್ತೆ ಜನರ ಕಲ್ಯಾಣ ಕಾರ್ಯಗಳಿಗೇ ವಿನಿಯೋಗವಾಗಬೇಕೇ ಹೊರತು, ನಮ್ಮಲ್ಲಿ ಯಾರದೇ ವೈಯಕ್ತಿಕ ಕೆಲಸ-ಕಾರ್ಯಗಳಿಗಲ್ಲ! ಅದರಲ್ಲೂ ಮಹಾಭಾರತ ಯುದ್ಧಕ್ಕೆ ಕಾರಣರಾಗಿ, ಲಕ್ಷಾಂತರ ಜನರ ಸಾವು-ನೋವಿಗೆ ಕಾರಣಕರ್ತರಾದ ಹಾಗೂ ರಾಜ್ಯದ ಆರ್ಥಿಕ ಸ್ಥಿತಿಯನ್ನೇ ಹಾಳುಮಾಡಿದ ಕೌರವರ ಶ್ರಾದ್ಧ ಸಮಾರಂಭಕ್ಕಂತೂ ಖಂಡಿತ ಅಲ್ಲ. ಪ್ರಜೆಗಳ ಪುಣ್ಯಕಾರ್ಯಗಳಿಗೆ ಉಪಯೋಗಿಸಬೇಕಾದ ಹಣವನ್ನು ದುಷ್ಟರ ಶ್ರಾದ್ಧಕ್ರಿಯೆಗೆ ವ್ಯಯ ಮಾಡೋದು ನ್ಯಾಯಸಮ್ಮತವಲ್ಲ’.
ಭೀಮಸೇನನ ನಿಲುವು ನ್ಯಾಯಸಮ್ಮತವಾಗಿತ್ತು. ಧರ್ಮರಾಯ ಉತ್ತರಿಸಲಾಗದೆ ಸುಮ್ಮನಾದ. ಆದರೆ ಧರ್ಮನಿಷ್ಠನಾದ ಆತ ತನ್ನ ಸ್ವಂತ ಹಣದಿಂದ ಧೃತರಾಷ್ಟ್ರನ ಅಂತಿಮ ಆಸೆಗಳನ್ನು ಪೂರೈಸಿದ. ಈ ಘಟನೆ ಸಾರ್ವಜನಿಕರಿಂದ ಸಂಗ್ರಹವಾದ ಹಣ ಎಷ್ಟು ಪವಿತ್ರ ಎಂಬುದನ್ನು ಎತ್ತಿ ತೋರಿಸುತ್ತದೆ. ಸರ್ಕಾರದ ಖರ್ಚಿನಲ್ಲಿ ತಮ್ಮ ತುಂಬು ಸಂಸಾರ ಸಮೇತ, ವೈದಕೀಯ ಚಿಕಿತ್ಸೆಗೆಂದೋ, ಇಲ್ಲವೇ ಆ ದೇಶದ ಸಂವಿಧಾನದ ವ್ಯವಸ್ಥೆಯನ್ನು ಅಧ್ಯಯನ ಮಾಡಬೇಕೆನ್ನುವ ವ್ಯರ್ಥ ಕಾರಣದಿಂದಲೋ, ವಿದೇಶಗಳಿಗೆ ಹೋಗುವ ನಮ್ಮ ರಾಜಕಾರಣಿಗಳಿಗೆ ಇದೊಂದು ನೀತಿಪಾಠವಲ್ಲವೇ? ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ನಷ್ಟವನ್ನು ತಂದೊಡ್ಡುತ್ತಿರುವ ಇಂತಹ ಚಟುವಟಿಕೆಗಳಿಗೆ ದೇಶದ ಆರ್ಥಿಕತೆಯ ಹಿತದೃಷ್ಟಿಯಿಂದ ಕಡಿವಾಣ ಹಾಕಲೇಬೇಕಲ್ಲವೇ?.
(ಲೇಖಕರು ಸಾಹಿತಿ, ವಾಗ್ಮಿ)
(ಪ್ರತಿಕ್ರಿಯಿಸಿ: manollasavv@gmail.com)