

ಬ್ರೆಜಿಲ್: ಕಟ್ಟಡಕ್ಕೆ ಬೆಂಕಿ ಬಿದ್ದಿರುವ ಹಿನ್ನೆಲೆ ಮಾಡೆಲ್ವೊಬ್ಬಳು 6ನೇ ಮಹಡಿಯಿಂದ ಆಯತಪ್ಪಿ ಬಿದ್ದು ಪ್ರಾಣ ಬಿಟ್ಟಿರುವ ಘಟನೆ ಬ್ರೇಜಿಲ್ನಲ್ಲಿ ನಡೆದಿದೆ.
ಮಾಯಾರಾ ನಿಟಾವೊ(27) ಮೃತ ಮಹಿಳೆ. ಈಕೆ ಬ್ರೆಜಿಲಿಯನ್ ಸಾವೊ ಪಾಲೊ ನಿವಾಸಿಯಾಗಿದ್ದಾರೆ. ತನ್ನ ಅಪಾರ್ಟ್ಮೆಂಟ್ಗೆ ಬೆಂಕಿ ತಗುಲಿರುವ ಹಿನ್ನಲೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಆರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ.
ಮಾಯಾರಾ ತನ್ನ ಸಹೋದರನೊಂದಿಗೆ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು.ಇದ್ದಕ್ಕಿದ್ದಂತೆ ಅಪಾರ್ಟ್ಮೆಂಟ್ ಬ್ಲಾಕ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಅನಾಹುತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಮಾಯಾರಾ ಅವರು ಆರನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದರು. 14 ಅಗ್ನಿಶಾಮಕ ವಾಹನಗಳು ಮತ್ತು 40 ಜನ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಮಾಯಾರಾ ಹಾಗೂ ಈಕೆಯ ಸಹೋದರನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಯಾರಾ ಅವರು ಸಾವನ್ನಪ್ಪಿದ್ದಾರೆ. ಆಕೆಯ ಸಹೋದರನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
27 ವರ್ಷದ ಮಾಯಾರಾ ನಿಟಾವೊ ಅವರು 2019 ರಿಂದ ಇಲ್ಲಿಯವರೆಗೂ ಒಂಬತ್ತು ಸೌಂದರ್ಯ ಸ್ಪರ್ಧೆಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.