ಜಿಲ್ಲೆಯಲ್ಲಿ 27 ಕೋಟಿ ರೂ. ಬೆಳೆ ನಷ್ಟ: ಸರ್ಕಾರಕ್ಕೆ ಜಿಲ್ಲಾಡಳಿತ ವರದಿ 40,419 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ರಾಗಿ

19-cpt-2p
Published on

ರಾಮನಗರ : ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವ ಜತೆಗೆ ಜೀವನಾಧಾರ ಬೆಳೆಯೂ ನಷ್ಟವಾಗಿದೆ. ಒಟ್ಟು 27 ಕೋಟಿ ರೂ. ಬೆಳೆ ನಷ್ಟದ ವರದಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿದೆ.

ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯ ಆಗುತ್ತಿದ್ದು, ನಿರಂತರ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ರಾಗಿ ಸೇರಿದಂತೆ ಇತರೆ ಬೆಳೆಗಳು ನೆಲ ಕಚ್ಚಿವೆ. ಇದರಿಂದಾಗಿ ಬೆಳೆಗಳು ಕೊಳೆಯಲು ಆರಂಭಿಸಿದ್ದು, ಜಿಲ್ಲಾ ಕೃಷಿ ಇಲಾಖೆ ಸಮೀಕ್ಷೆಯನ್ನು ನಡೆಸಿ ವರದಿಯನ್ನು ಸರ್ಕಾರಕ್ಕೆ ಶುಕ್ರವಾರ ನೀಡಿದೆ.

ಏನಿದೆ ವರದಿಯಲ್ಲಿ?: ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಬೆಳೆ ನಷ್ಟದ ಸರ್ವೇ ನಡೆಸಿವೆ. ಜಿಲ್ಲೆಯಲ್ಲಿ 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗುತ್ತಿದೆ. ಇತರ ಬೆಳೆಗಳು ಸೇರಿ ಒಟ್ಟು 86,473 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಇದರಲ್ಲಿ 41,644 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಮಳೆಯಿಂದಾಗಿ ನೆಲ ಕಚ್ಚಿದೆ. ಅಂದಾಜು ಶೇ.50ರಷ್ಟು ಪ್ರದೇಶದಲ್ಲಿ ಈ ಬಾರಿ ಬೆಳೆ ಕೈಸೇರುವುದಿಲ್ಲ. ಜಿಲ್ಲೆಯಲ್ಲಿ ಜ.1ರಿಂದ ಆರಂಭಗೊಂಡು ಇದುವರೆಗೂ 813 ಮಿಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 989 ಮಿಮೀ. ಮಳೆಯಾಗಿದೆ. ಇದು ಶೇ.22ರಷ್ಟು ಹೆಚ್ಚಾಗಿದೆ.

ನವೆಂಬರ್‌ನಲ್ಲಿ 42 ಮಿಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 154 ಮಿಮೀ. ಮಳೆಯಾಗಿದ್ದು, ಶೇ. 270ರಷ್ಟು ಹೆಚ್ಚು ಮಳೆ ಸುರಿದಿದೆ. ಜಿಲ್ಲೆಯಲ್ಲಿನ ಕೃಷಿ ಭೂಮಿಯ ಅರ್ಧದಷ್ಟು ಸಲು ಮಳೆ ಪಾಲಾಗಿದೆ. ಜೋಳ, ತೊಗರಿ, ಹುರುಳಿ ಸಹ ನೆಲಕಚ್ಚಿದೆ. ಆದರೆ, ಹೆಚ್ಚು ನಷ್ಟವಾಗಿರುವುದು ರಾಗಿ ಬೆಳೆ. ಜಿಲ್ಲೆಯ ಒಟ್ಟು 86,473 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಜೋಳ 454 ಹೆಕ್ಟೇರ್, ತೊಗರಿ 451 ಹೆಕ್ಟೇರ್, ಹುರುಳಿ 320 ಹೆಕ್ಟೇರ್ ನಷ್ಟವಾಗಿದ್ದರೆ, 40,419 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ರಾಗಿ ನಷ್ಟವಾಗಿದೆ.

ಬದುಕು ಅತಂತ್ರ: ಮಳೆ ಸರ್ವರ ಬದುಕನ್ನೂ ಅತಂತ್ರಗೊಳಿಸಿದೆ. ಈಗಾಗಲೇ ಮಳೆಯಿಂದಾಗಿ ಬಿಸಿಲು ಕಾಣದೆ ಬೆಳೆ ನಷ್ಟವಾಗಿದ್ದರೆ, ಜನತೆ ಮಾನಸಿಕವಾಗಿ ಕುಂದುತ್ತಿದ್ದಾರೆ. ಸತತ ಮೂರು ತಿಂಗಳ ಕಾಲ ಹಿಂಗಾರಿನಲ್ಲಿ ಈ ಪ್ರಮಾಣದಲ್ಲಿ ಮಳೆ ಆಗಿರುವುದನ್ನು ಕಂಡಿಲ್ಲ ಎನ್ನುತ್ತಾರೆ ಹಿರಿಯರು. ಅಲ್ಲದೆ, ಹಲವಾರು ಮಂದಿ ಶೀತ ಜ್ವರಕ್ಕೆ ತುತ್ತಾಗುತ್ತಿದ್ದು, ಆಸ್ಪತ್ರೆ ಹಾದಿ ಹಿಡಿಯುತ್ತಿದ್ದಾರೆ.

ಕೆರೆಯಂತಾಯ್ತು ಬೈಪಾಸ್ ರಸ್ತೆ

ಚನ್ನಪಟ್ಟಣ : ನೂತನವಾಗಿ ನಿರ್ವಾಣವಾಗುತ್ತಿರುವ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯೇ ಕೆರೆಯಾಗಿ ಬದಲಾಗಿದೆ.

ಹೆದ್ದಾರಿಯ ಕುಂತೂರುದೊಡ್ಡಿ ಹಾಗೂ ರಾಂಪುರ ಮಧ್ಯದಲ್ಲಿ ರಸ್ತೆ ಶುಕ್ರವಾರ ಜಲಾವೃತವಾಗಿದೆ. ಈ ಪ್ರದೇಶದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಪೂರ್ಣಗೊಂಡಿದ್ದು, ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಮಳೆನೀರು ಹರಿದುಹೋಗಲು ಸಾಧ್ಯವಾಗದೆ ರಸ್ತೆಗೆ ಹರಿದು ಮಿನಿ ಕೆರೆಯಂತೆ ನಿರ್ಮಾಣವಾಗಿ ಅವಾಂತರ ಸೃಷ್ಟಿಸಿದೆ. ಹತ್ತಾರು ಎಕರೆ ರೈತರ ಕೃಷಿ ಜಮೀನುಗಳು ಕೂಡ ನೀರಿನಲ್ಲಿ ಮುಳುಗಡೆಯಾಗಿವೆ. ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಿದ್ದ ರಾಗಿ, ಟೊಮ್ಯಾಟೋ, ಜೋಳ ಮತ್ತಿತರ ಬೆಳೆಗಳು ಜಲಾವೃತವಾಗಿವೆ. ಇದರಿಂದಾಗಿ ರೈತರ ಅಪಾರವಾದ ಬೆಳೆನಷ್ಟವಾಗಿದೆ.

ಹೇಳೋರು... ಕೇಳೋರು ಇಲ್ಲ...: ಎನ್‌ಎಚ್ ಅಧಿಕಾರಿಗಳು ಹಾಗೂ ಈ ರಸ್ತೆ ಗುತ್ತಿಗೆ ಪಡೆದಿರುವ ಡಿಬಿಎಲ್ ಸಂಸ್ಥೆಯ ನಿರ್ಲಕ್ಷತ್ಯೃ ಹಾಗೂ ಬೇಜವಾಬ್ದಾರಿತನವೇ ಈ ಅವಾಂತರಗಳಿಗೆ ಕಾರಣವಾಗಿದೆ. ಈ ರಸ್ತೆ ಹಾದು ಹೋಗಿರುವುದು ಬಹುತೇಕ ಕೃಷಿ ಭೂಮಿಯಲ್ಲಿ. ಇದರ ಅಕ್ಕಪಕ್ಕದ ನೀರುಗಾಲುವೆಗಳನ್ನು ಮುಚ್ಚಿರುವುದು ಸಮಸ್ಯೆಗೆ ಮೂಲವಾಗಿದೆ. ಜತೆಗೆ ನೀರು ಹರಿದುಹೋಗಲು ವ್ಯವಸ್ಥೆ ವಾಡದಿರುವುದರಿಂದ ರಸ್ತೆಯಲ್ಲಿ ಆಳುದ್ದ ನೀರು ನಿಲ್ಲುವಂತಾಗಿದೆ. ಕೆಲದಿನಗಳ ಹಿಂದೆಯೂ ಇದೇ ರೀತಿ ಪರಿಸ್ಥಿತಿ ನಿರ್ಮಾಣವಾಗಿ ಅಕ್ಕಪಕ್ಕದ ಜಮೀನುಗಳಲ್ಲಿ ಬೆಳೆದಿದ್ದ ಬೆಳೆ ನಷ್ಟವಾಗಿತ್ತು. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ.

ಜಮೀನುಗಳು ಹಾಳಾಗುತ್ತಿವೆ ಎಂದು ರಸ್ತೆ ಪಕ್ಕದ ಜಮೀನುಗಳ ವಾಲೀಕರಾದ ರಾಜಣ್ಣ, ಟಿ.ಆರ್. ಹರೀಶ್, ಅಜಿತ್, ಸಿದ್ದೇಗೌಡ, ಹನುಮಂತ ಮತ್ತಿತರ ರೈತರು ಆರೋಪಿಸಿದ್ದಾರೆ. ಖುದ್ದು ತಹಸೀಲ್ದಾರ್ ನಾಗೇಶ್ ಸ್ಥಳಕ್ಕಾಗಮಿಸಿ, ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರೂ ಪ್ರಯೋಜನವಾಗಿಲ್ಲ. ರೈತರಿಗೆ ವರವಾಗಬೇಕಾದ ಹೆದ್ದಾರಿ ಸಂಬಂಧಪಟ್ಟವರ ನಿರ್ಲಕ್ಷತ್ಯೃದಿಂದ ಕಂಟಕವಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net