26ರಂದು ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡಿಲ್ಲ : ಹೈಕೋರ್ಟ್‌ಗೆ ಕಂಬಳ ಆಯೋಜನಾ ಸಮಿತಿ ಮಾಹಿತಿ

highcourt
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅ.26ರಂದು ಕಂಬಳ ಸ್ಪರ್ಧೆ ಏರ್ಪಡಿಸಿಲ್ಲ ಎಂಬ ಮಾಹಿತಿಯನ್ನು ಕಾರ್ಯಕ್ರಮದ ಆಯೋಜಕರು ಹೈಕೋರ್ಟ್‌ಗೆ ಬುಧವಾರ ತಿಳಿಸಿದ್ದಾರೆ.

ಬೆಂಗಳೂರು ಕಂಬಳ ಸಮಿತಿಗೆ ಸ್ಪರ್ಧೆ ಆಯೋಜಿಸಲು ಅನುಮತಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ‘ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆ್ ಅನಿಮಲ್ಸ್ ’( ಪೇಟಾ) ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಈ ವೇಳೆ ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಕಳೆದ ವರ್ಷ ಬೆಂಗಳೂರು ಕಂಬಳಕ್ಕೆ ಕಾನೂನು ಪ್ರಕಾರವಾಗಿ ಅನುಮತಿ ನೀಡಲಾಗಿದೆ. ಈ ಬಗ್ಗೆ ದಾಖಲೆಗಳನ್ನು ಪೀಠದ ಮುಂದೆ ಸಲ್ಲಿಸುವುದಾಗಿ ಹೇಳಿದರು. ಜತೆಗೆ ಅರ್ಜಿದಾರರಿಗೆ ಕಂಬಳವು ನಗರದಲ್ಲಿ ಆಯೋಜನೆ ಮಾಡುವುದು ಕೋಣಗಳ ಮೇಲೆ ಕೌರ್ಯ ಏಸಗಿದಂತಾಗುತ್ತದೆ ಎಂಬ ಬಗ್ಗೆ ಆಕ್ಷೇಪವಿದೆ.

ಹೀಗಾಗಿ ಕಂಬಳವನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಾತ್ರ ನಡೆಸಬೇಕೆ ಎಂಬ ಪ್ರಶ್ನೆ ನ್ಯಾಯಾಲಯದ ಮುಂದಿದೆ ಎಂದರು.

ಮಾತ್ರವಲ್ಲದೇ ಕಂಬಳ ಸಂಸ್ಕೃತಿಯ ಪ್ರತೀಕ. ಇದನ್ನು ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಪರಿಚಯಿಸುವ ಸಂದರ್ಭ ಬಂದಿದೆ.ಈ ಪ್ರಕ್ರಿಯೆಯಲ್ಲಿ ಪ್ರಾಣಿಗಳಿಗೆ ಹಿಂಸೆಯಾಗುತ್ತಿದೆಯೇ ಎಂಬ ಮನೆಮಾಡಿದೆ.

ಕುದುರೆ ರೇಸ್ ಪದ್ಯಾಂಟದ ವೇಳೆ ಕುದುರೆಗಳನ್ನು ಬೇರೆ ದೇಶಗಳಿಂದ ಆಮದು ಅಥವಾ ರಫ್ತು ಮಾಡಲಾಗುತ್ತದೆ. ಬೇರೆ ರಾಜ್ಯಗಳಿಗೂ ಅವುಗಳನ್ನು ಸಾಗಿಸಲಾಗುತ್ತದೆ. ಈ ವಿಚಾರ ಸಂಬಂಧ ಯಾವುದೇ ನಿರ್ಧಾರ ಕೈಗೊಂಡರೂ ಪೀಠದ ಗಮನಕ್ಕೆ ತರಲಾಗುವುದು ಎಂದರು.

ಪೇಟಾ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿ ಕಂಬಳ ಸ್ಪರ್ಧೆ ನಡೆಸುವಾಗ ಅನುಮತಿ ನೀಡಲಾಗುತ್ತದೆಯೇ ಎಂಬುದರ ಸಂಬಂಧ ನಮಗೆ ಮುಂಚಿತವಾಗಿ ತಿಳಿಸಬೇಕು.

ಆಗ ನಾವು ನ್ಯಾಯಾಲಯದ ಮುಂದೆ ಬರುತ್ತೇವೆ. ನ 9ರಂದು ದ.ಕ ಜಿಲ್ಲೆಯ ಪಿಲಿಕುಳದ ಪ್ರಾಣಿ ಸಂಗ್ರಹಾಲಯದ ಸಮೀಪ ಕಂಬಳ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ನ.5ಕ್ಕೆ ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net