

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ 264 ರಕ್ಷಣಾ ಸಿಬ್ಬಂದಿ ಪ್ರಾಣ ತ್ಯಾಗ ಮಾಡಬೇಕಾಗಿ ಬಂತು ಎಂದು ಗಡಿ ರಕ್ಷಣಾ ಪಡೆ (ಬಿಎಸ್ಎಫ್)ಯ ಮಹಾ ನಿರ್ದೇಶಕ ಎನ್.ಎಸ್.ಜಮ್ವಾಲ್ ಹೇಳಿದರು.
ಬಿಎಸ್ಎಫ್ ಶಹೀದ್ ಮೆಮೋರಿಯಲ್ ಪಲೌರಾ ಕ್ಯಾಂಪ್ನಲ್ಲಿ ಇಂದು ಹುತಾತ್ಮರಿಗೆ ಗೌರವ ಸಲ್ಲಿಸಿದ ಅವರು, ದೇಶ ರಕ್ಷಣೆ ಕಾರ್ಯದಲ್ಲಿ ಹುತಾತ್ಮರಾದವರನ್ನು ಸ್ಮರಿಸಿಕೊಂಡರು. 264 ರಕ್ಷಣಾ ಸಿಬ್ಬಂದಿ ಪೈಕಿ 25 ಯೋಧರು ಬಿಎಸ್ಎಫ್ನವರು. ಇವರು ಗಡಿ ಭಾಗದಲ್ಲಿ ದೇಶ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದವರು. ಇದರ ಹೊರತಾಗಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲೂ ಬಿಎಸ್ಎಫ್ ಯೋಧರ ಪಾತ್ರ ಪ್ರಮುಖವಾದುದು ಎಂದು ಹೇಳಿದರು.
ಪೊಲೀಸ್ ಹುತಾತ್ಮ ದಿನಾಚರಣೆ ಜಮ್ಮು-ಕಾಶ್ಮೀರದ ವಿವಿಧೆಡೆ ಆಯೋಜಿಸಲ್ಪಟ್ಟಿತ್ತು. ಇದೇ ದಿನ 1959ರಲ್ಲಿ ಚೀನೀ ಯೋಧರ ಜತೆಗೆ ಹೋರಾಡಿದ ಸಿಎಪಿಎಫ್ ಯೋಧರ ಬಲಿದಾನವನ್ನೂ ಸ್ಮರಿಸಲಾಗುತ್ತಿದೆ. 1960ರಿಂದ ಈ ದಿನಾಚರಣೆ ಚಾಲ್ತಿಯಲ್ಲಿದೆ. (ಏಜೆನ್ಸೀಸ್)