

ಬೆಂಗಳೂರು : ಕರ್ನಾಟಕ ಬಂದ್ ನಡುವೆಯೂ ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳು ಶುಕ್ರವಾರ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆ ವರೆಗೂ ಸೇವೆ ಸಲ್ಲಿಸಿವೆ. ಇದರ ಪರಿಣಾಮ 22,695 ದಸ್ತಾವೇಜುಗಳು ನೋಂದಣಿ ಆಗಿದ್ದು, 260 ಕೋಟಿ ರೂಪಾಯಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹವಾಗಿದೆ.
ಅಕ್ಟೋಬರ್ 1 ರಿಂದ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಆಗುವ ಕಾರಣಕ್ಕೆ ಶುಕ್ರವಾರ ಸಹ ಅತೀ ಹೆಚ್ಚು ಮಂದಿ ಉಪ ನೋಂದಣಿ ಕಚೇರಿಗೆ ಬಂದು ಸೇವೆ ಪಡೆದಿದ್ದಾರೆ.
ಶುಕ್ರವಾರ ಮತ್ತು ಶನಿವಾರ ಅತೀ ಹೆಚ್ಚು ಜನರು ಬರುತ್ತಾರೆ ಎಂಬ ಕಾರಣಕ್ಕೆ ಸಬ್ ರಿಜಿಸ್ಟ್ರಾರ್‌ಗಳು ಸೇರಿದಂತೆ ಅಧಿಕಾರಿ, ಸಿಬ್ಬಂದಿ ವರ್ಗ ಗುರುವಾರ (ಸೆ.28) ಸರ್ಕಾರಿ ರಜೆ ದಿನವೂ ಕೆಲಸ ಮಾಡಿ ನೋಂದಣಿಗೆ ಸಜ್ಜಾಗಿದ್ದರು. ಶುಕ್ರವಾರ ದಸ್ತಾವೇಜುಗಳಿಗೆ ಯಾವುದೇ ತೊಂದರೆ ಆಗದಂತೆ ಮುಂಜಾಗೃತೆ ವಹಿಸಿದ್ದ ಫಲವಾಗಿ 22,695 ನೋಂದಣಿ ಪೂರ್ಣವಾಗಿವೆ.
ಸೆ.27ರಂದು ಕೆ.ಆರ್.ಪುರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 395, ಬಾಣಸವಾಡಿ 361, ಬ್ಯಾಟರಾಯನಪುರ 286, ಯಲಹಂಕ 278, ಬೊಮ್ಮನಹಳ್ಳಿ 270 ದಸ್ತಾವೇಜುಗಳು ನೋಂದಣಿ ಮಾಡಿದ ಸಬ್ ರಿಜಿಸ್ಟ್ರಾರ್ ಕಚೇರಿಗಳ ಸಾಲಿನಲ್ಲಿ ಮೊದಲ ಐದು ಸ್ಥಾನದಲ್ಲಿ ಇದ್ದವು. ಕೆಂಗೇರಿ, ಶಾಂತಿನಗರ, ತಾವರೆಕೆರೆ, ಜಯನಗರ ಸೇರಿದಂತೆ 29 ಉಪ ನೋಂದಣಿ ಕಚೇರಿಗಳು 100ಕ್ಕೂ ಅಧಿಕ ದಸ್ತಾವೇಜುಗಳ ನೋಂದಣಿ ನಡೆಸಿ ದಾಖಲೆ ನಿರ್ಮಿಸಿದ್ದವು. ಇದರ ಫಲವಾಗಿ 26,058 ದಾಖಲೆಗಳು ನೋಂದಣಿ ಆಗಿ 312 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಶುಕ್ರವಾರ ತುಸು ಇಳಿಮುಖ ಆಗಿದೆ.