

ಕೋಲಾರ: ಸಮರ್ಪಕ ದಾಖಲೆ ಇದ್ದಲ್ಲಿ "ಪಿ'ನಂಬರ್ ದುರಸ್ತಿ ಮಾಡಿಕೊಡಲು ಡಿ. 26ರಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ವಿ.ನಾಗರಾಜ್ ತಿಳಿಸಿದರು.
ನಗರದ ತಾಲೂಕು ಆಡಳಿತ ಭವನದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಮೀನು ಅನುಭವ ಹೊಂದಿ, ಸಾಗುವಳಿ ಚೀಟಿ ಪಡೆದಿದ್ದರೂ "ಪಿ'ನಂಬರ್ ನೀಡಿರುವುದರಿಂದ ಬಡವರು ಜಮೀನು ನೋಂದಣಿ, ಮಾರಾಟ ಮತ್ತು ಸಾಲ ಪಡೆಯಲಿಕ್ಕೆ ಸಾಧ್ಯವಾಗುತ್ತಿಲ್ಲ. "ಪಿ'ನಂಬರ್ ತೆರವಿಗೆ ಸಾರ್ವಜನಿಕರಿಂದ ವ್ಯಾಪಕ ಮನವಿಗಳು ಕೇಳಿಬರುತ್ತಿದ್ದು ಜನವರಿ ಅಂತ್ಯದವರೆಗೆ ಈ ಆಂದೋಲನವನ್ನು ತಾಲೂಕು ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಆಂದೋಲನ ಪ್ರಯುಕ್ತ ವಿಶೇಷ ತಂಡ ರಚನೆ ಮಾಡಲಾಗಿದೆ. ಶಿರಸ್ತೇದಾರ್, ಗ್ರೇಡ್-2 ತಹಸೀಲ್ದಾರ್, ಪ್ರಥಮ ಮತ್ತು ದ್ವೀತಿಯ ದರ್ಜೆ ಗುಮಾಸ್ತ, ಆಯಾ ಹೋಬಳಿಯ ಕಂದಾಯ ನಿರೀಕ್ಷಕ, ಗ್ರಾಮಲೆಕ್ಕಿಗರು ತಂಡದಲ್ಲಿರುತ್ತಾರೆ. "ಪಿ'ನಂಬರ್ ತೆರವಿಗೆ ಸಂಬಂಧಿಸಿದ ರೈತರು ಈ ತಂಡ ಕಾರ್ಯನಿರ್ವಹಿಸುವ ಕೌಂಟರ್ಗೆ ಅರ್ಜಿ ನೀಡಿದರೆ ದಾಖಲೆ ಸಮರ್ಪಕವಾಗಿದ್ದಲ್ಲಿ 30 ದಿನದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಲೂಕಿನ ಸುಮಾರು 7 ಸಾವಿರ "ಪಿ'ನಂಬರ್ ಜಮೀನುಗಳಿವೆ. ಅರ್ಜಿದಾರರ ಮನವಿ ನ್ಯಾಯಯುತವಾಗಿದ್ದರೆ ದುರಸ್ತಿಗೊಳಿಸಿ ಹೊಸ ಸರ್ವೇ ನಂಬರ್ ನೀಡಲಾಗುವುದು. ಒಂದು ವೇಳೆ ನಕಲಿ ದಾಖಲೆಯಾಗಿದ್ದರೆ ಸಿಕ್ಕಿಬಿದ್ದು ತೊಂದರೆ ಅನುಭವಿಸಬೇಕಾಗುತ್ತದೆ. ಮಧ್ಯವರ್ತಿಗಳು ಅಥವಾ ಶಿಫಾರಸು ಮೂಲಕ ಬರುವುದು ಬೇಡ. ಮೂಲ ದಾಖಲೆಗಳನ್ನು ಸಲ್ಲಿಸಿದರೆ ಸಾಕು, ಅಗತ್ಯವೆನಿಸಿದರೆ ಮಿಸ್ಸಿಂಗ್ ರೆಕಾರ್ಡ್ ಸಮಿತಿಗೆ ಕಳುಹಿಸಿ ಲಭ್ಯವಿರುವ ದಾಖಲೆ ನಾವೇ ಪಡೆದು ಪರಿಶೀಲಿಸಿ "ಪಿ'ನಂಬರ್ ಸಮಸ್ಯೆಯಿಂದ ಮುಕ್ತರನ್ನಾಗಿ ಮಾಡಲಾಗುವುದು. ಇದಕ್ಕೆ ನಯಾಪೈಸೆ ಖರ್ಚು ಮಾಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ನ್ಯಾಯಾಲಯದಲ್ಲಿದ್ದರೆ ದುರಸ್ತಿಯಿಲ್ಲ: ರೈತರು ಅರ್ಜಿ 57 ಅಥವಾ 53, 94ಸಿ, ಸಾಗುವಳಿ ಚೀಟಿ, ಕಿಮ್ಮತ್ತು ಕಟ್ಟಿರುವ ರಸೀದಿ, ಮಂಜೂರು ಪತ್ರ, ಮ್ಯುಟೇಷನ್ ಪತ್ರ ಒದಗಿಸಬೇಕಾಗುತ್ತದೆ. ಇದೆಲ್ಲ ಸಮರ್ಪಕವಾಗಿದ್ದಲ್ಲಿ ವಾರದಲ್ಲಿ ಅರ್ಜಿ ಇತ್ಯರ್ಥಮಾಡಿ ಹೊಸ ಸರ್ವೇ ನಂಬರ್ ನೀಡಲಾಗುವುದು. ಒಂದೇ ಸರ್ವೇ ಸಂಖ್ಯೆಯಲ್ಲಿ ನೂರಾರು ಜನರಿಗೆ ಜಮೀನು ಮಂಜೂರಾಗಿದ್ದರೂ, ಏಕ ವ್ಯಕ್ತಿ ಕೋರಿಕೆ ಮೇರೆಗೆ ದುರಸ್ತಿ ಮಾಡಿ ಪ್ರತ್ಯೇಕ ಸರ್ವೇ ನಂಬರ್ ನೀಡಲಾಗುವುದು. ಜಮೀನು ಮಂಜೂರಾತಿ, ಸಾಗುವಳಿ ಚೀಟಿ ಹಾಗೂ ಹಕ್ಕು ಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದರೆ, ಮೇಲ್ಮನವಿ ಸಲ್ಲಿಕೆಯಾಗಿದ್ದರೆ ಅಥವಾ ವಿಚಾರಣೆ ಹಂತದಲ್ಲಿದ್ದರೆ ಅಂತಹ ಪ್ರಕರಣಗಳನ್ನು ವಿಲೇವಾರಿಗೆ ಕೈಗೆತ್ತಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಡಿ.ಕೆ.ರವಿ ಸ್ಫೂರ್ತಿ:
ರೈತರು ದಾಖಲೆಗಳೊಂದಿಗೆ ಸಲ್ಲಿಸುವ ಅರ್ಜಿಗಳನ್ನು ನೋಂದಣಿ ಮಾಡಿಕೊಳ್ಳಲಾಗುವುದು. ಕಚೇರಿಗೆ ಸಲ್ಲಿಕೆಯಾದ ಅರ್ಜಿಗಳ ಮೇಲೆ ಖುದ್ದು ನಿಗಾವಹಿಸಲಾಗುವುದು. ಭ್ರಷ್ಟಾಚಾರಕ್ಕೆ ಎಳ್ಳಷ್ಟೂ ಆಸ್ಪದವಿಲ್ಲ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ದಿ.ಡಿ.ಕೆ.ರವಿ ಅವರು ಪೋಡಿ ದುರಸ್ತಿ ಅಭಿಯಾನ ಹಮ್ಮಿಕೊಂಡಿದ್ದು ಯಶಸ್ವಿಯಾಗಿತ್ತು. ಅದೇ ಸ್ಫೂರ್ತಿ ಮತ್ತು ಮಾದರಿಯಲ್ಲಿ 30 ದಿನಗಳ "ಪಿ'ನಂಬರ್ ದುರಸ್ತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸ್ವಂತ ಜಿಲ್ಲೆಯಾದ್ದರಿಂದ ನಮ್ಮ ಜನ ಅಲೆದಾಡುವುದನ್ನು ತಪ್ಪಿಸಬೇಕೆಂಬ ಸದುದ್ದೇಶದೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ವಿ.ನಾಗರಾಜ್ ವಿವರಿಸಿದರು.
ಈ ಹಿಂದೆ ಕಡತ ವಿಲೇವಾರಿ ಅಭಿಯಾನ ಹಮ್ಮಿಕೊಂಡಿದ್ದು, 1,600 ಕಡತ ವಿಲೇವಾರಿ ಮಾಡಲಾಗಿದೆ. 70 ಜನರಿಗೆ ಸಾಗುವಳಿ ಚೀಟಿ ನೀಡಿದ್ದು, 134 ಮಂದಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಜತೆಗೆ 100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕೆರೆ, ಗುಂಡುತೋಪು, ದಾರಿ ಒತ್ತುವರಿ ತೆರವುಗೊಳಿಸಲಾಗಿದೆ. 300 ಜನರಿಗೆ ಹೊಸದಾಗಿ ಪಿಂಚಣಿ ಸೌಲಭ್ಯ ಕಲ್ಪಿಸಿಲಾಗಿದೆ.
| ವಿ.ನಾಗರಾಜ್ ತಹಸೀಲ್ದಾರ್