ಲೆಕ್ಕಕ್ಕೆ ಸಿಗುತ್ತಿಲ್ಲ ಕರೊನಾಗೆ ಬಲಿಯಾದವರ ಸಂಖ್ಯೆ, ಮಹಾಮಾರಿ ನಿಯಂತ್ರಿಸಿದ ತಿಂಗಳುಗಳ ಬಳಿಕಷ್ಟೇ ತಿಳಿಯಲಿದೆ ನಿಖರ ಅಂಕಿ-ಅಂಶ

Missing Deaths
Published on

ನವದೆಹಲಿ: ಚೀನಾದ ವುಹಾನ್​ನಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆಯನ್ನು ಇತ್ತೀಚೆಗೆ ಪರಿಷ್ಕರಿಸಲಾಗಿತ್ತು. ಮೊದಲು ಹೇಳಿದ್ದಕ್ಕಿಂತ ದುಪ್ಪಟ್ಟಾಗಿತ್ತು. ಅಂದರೆ, ವುಹಾನ್​ವೊಂದರಲ್ಲಿಯೇ 2,590 ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಿತ್ತು. ಮೊದಲಿನ ಸಂಖ್ಯೆ 1,290 ಆಗಿತ್ತು. ಅಲ್ಲಿಗೆ ಚೀನಾದಲ್ಲಿ ಕರೊನಾಗೆ ಬಲಿಯಾದವರ ಸಂಖ್ಯೆ 3,869ಕ್ಕೆ ಏರಿಕೆಯಾಗಿತ್ತು.

ಇದಾದ ಬಳಿಕ, ಎಲ್ಲ ರಾಷ್ಟ್ರಗಳಲ್ಲೂ ಇಂಥದ್ದೇ ವಿದ್ಯಮಾನ ನಡೆಯಲಿದೆ ಎಂದು ವಿಶ್ವಸಂಸ್ಥೆ ಹೇಳಿತ್ತು. ಇದೀಗ ಯುರೋಪಿಯನ್​ ರಾಷ್ಟ್ರಗಳಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಶೇ.20-30ರವರೆಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಜಗತ್ತಿನಲ್ಲಿ ಒಟ್ಟು 26.63 ಲಕ್ಷ ಜನರು ಸೋಂಕಿತರಾಗಿದ್ದಾರೆ. ಈವರೆಗೆ ಮೃತಪಟ್ಟವರ ಸಂಖ್ಯೆ 1,77,420ಕ್ಕೆ ತಲುಪಿದೆ. ಈ ಪೈಕಿ ಅಮೆರಿಕವೊಂದರಲ್ಲಿಯೇ 45,000, ಇಟಲಿಯಲ್ಲಿ 24,648, ಸ್ಪೇನ್​ನಲ್ಲಿ 21,282, ಫ್ರಾನ್ಸ್​ನಲ್ಲಿ 20,829 ಹಾಗೂ ಜರ್ಮನಿಯಲ್ಲಿ 5 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಈ ದೇಶಗಳು ಸೇರಿ ಒಟ್ಟು 11 ರಾಷ್ಟ್ರಗಳಲ್ಲಿ ಈ ಸಂಖ್ಯೆ ಒಟ್ಟಾರೆ 25,000ಕ್ಕೂ ಅಧಿಕವಾಗಲಿದೆ. ವಿಶ್ವಾದ್ಯಂತ ಲಕ್ಷಕ್ಕೂ ಅಧಿಕ ಜನರು ಈಗಿರುವ ಪಟ್ಟಿಗೆ ಸೇರಲಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೆಲ್ಲ ಕಾರಣವೆಂದರೆ, ಮೃತರ ಸಂಖ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ. ಹೌದು... ವಿಶ್ವಾದ್ಯಂತ ಆಯಾ ರಾಷ್ಟ್ರಗಳು ನೀಡುತ್ತಿರುವ ಮಾಹಿತಿ ಆಸ್ಪತ್ರೆಯಲ್ಲಿ ಸಂಭಿವಿಸಿದ ಸಾವುಗಳಿಗೆ ಸಂಬಂಧಿಸಿದ್ದು ಮಾತ್ರ. ಆಸ್ಪತ್ರೆ ಹೊರಗೆ ಸಂಭವಿಸಿರಬಹುದಾದ ಸಾವುಗಳ ಅಂಕಿ-ಸಂಖ್ಯೆ ತಿಳಿಯುತ್ತಿಲ್ಲ. ಕರೊನಾ ಮಹಾಮಾರಿ ತಣ್ಣಗಾದ ಬಳಿಕ ತಿಂಗಳುಗಳ ಬಳಿಕವಷ್ಟೇ ಇದರ ನಿಖರ ಸಂಖ್ಯೆ ತಿಳಿದು ಬರಲಿದೆ ಎನ್ನುತ್ತಾರೆ ಜನಸಂಖ್ಯಾಶಾಸ್ತ್ರಜ್ಞರು.

ಇದು ಅಂಕಿ-ಸಂಖ್ಯೆಗಳಲ್ಲಿನ ಬದಲಾವಣೆ ಮಾತ್ರವಲ್ಲ, ಅವರಿಂದ ಉಂಟಾದ ಸಂಪರ್ಕ, ಸೋಂಕಿತರ ಸಂಖ್ಯೆಯೂ ಕೂಡ ಹೆಚ್ಚಾಗಲಿದೆ. ಇದು ನಿಗೂಢವಾದರೆ ಕರೊನಾವನ್ನು ನಿಯಂತ್ರಿಸುವುದು ಕಷ್ಟವಾಗಲಿದೆ ಎಂದು ಪರಿಣತರು ಅಭಿಪ್ರಾಯಪಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net