ಹದಿನೈದು ದಿನಗಳ ಹಿಂದಷ್ಟೇ ಕರೊನಾ ರೋಗಿಗಳಿಗಾಗಿ ಆರಂಭಿಸಿದ 4,000 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಪಾಳು ಬಿದ್ದಿರೋದೇಕೆ?

London Hospital
Published on

ಲಂಡನ್​: ಕೋವಿಡ್​ -19 ರೋಗಿಗಳ ಚಿಕಿತ್ಸೆಗಾಗಿ ಚೀನಾ ದಾಖಲೆಯ ಹತ್ತೇ ದಿನದಲ್ಲಿ 1,000 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ನಿರ್ಮಿಸಿತ್ತು. ತನ್ನಲ್ಲಿನ ವೇಗಕ್ಕೆ ಜಗತ್ತನ್ನೇ ನಿಬ್ಬೆರಗಾಗುವಂತೆ ಮಾಡಿತ್ತು. ಅಂತೆಯೇ ಬ್ರಿಟನ್​​ ಕೂಡ ಇಂಥದ್ದೇ ಸಾಹಸ ಮೆರೆದಿದೆ. ಕರೊನಾ ವೈರಸ್​ನಿಂದ ಸೋಂಕಿತರಾದವರಿಗೆ ಚಿಕಿತ್ಸೆ ನೀಡಲೆಂದು 4,000 ಹಾಸಿಗೆಗಳ ಸಾಮರ್ಥ್ಯದ ಬೃಹತ್​ ಆಸ್ಪತ್ರೆಯನ್ನು ನಿರ್ಮಾಣ ಮಾಡಿ ಅದಕ್ಕೆ ನೈಟಿಂಗೇಲ್​ ಆಸ್ಪತ್ರೆ ಎಂದು ನಾಮಕರಣ ಮಾಡಿದೆ. ಪೂರ್ವ ಲಂಡನ್​ನ ವಸ್ತು ಪ್ರದರ್ಶನ ಸ್ಥಳವನ್ನು 9 ದಿನಗಳಲ್ಲಿ ಅತ್ಯಾಧುನಿಕ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ.

ಏಪ್ರಿಲ್​ 7ರಿಂದ ಇಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ವಿಷಯ ಅದಲ್ಲ. ಇಷ್ಟು ದೊಡ್ಡ ಆಸ್ಪತ್ರೆ ಬಳಕೆಯಾಗುತ್ತಿರುವುದಾದರೂ ಎಷ್ಟು ಜನಕ್ಕೆ ಗೊತ್ತೆ? ಕೇವಲ 40 ಜನರಿಗಷ್ಟೇ. ಹೌದು.... ಇದು ಅಚ್ಚರಿಯಾದರೂ ಸತ್ಯ.

ಹಾಗೆಂದು ಇಲ್ಲಿಗೆ ರೋಗಿಗಳು ಬರುತ್ತಿಲ್ಲವೆಂದಲ್ಲ, ಜೀವನ್ಮರಣ ಸ್ಥಿತಿಯಲ್ಲಿರುವ ಕನಿಷ್ಠ 50 ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನಿರಾಕರಿಸಲಾಗಿದೆ. ಲಂಡನ್​ನ ಪ್ರಮುಖ ಆಸ್ಪತ್ರೆಗಳಿಂದ ವೆಂಟಿಲೇಟರ್​ ಮೂಲಕ ಇಲ್ಲಿಗೆ ಕರೆತರಲಾದ ರೋಗಿಗಳಿಗೆ ಪ್ರವೇಶವನ್ನೇ ನೀಡದೇ ಹಾಗೆಯೇ ಕಳುಹಿಸಲಾಗುತ್ತಿದೆ.

ಹೀಗಾಗಿ ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾದ ಈ ತಾತ್ಕಾಲಿಕ ಆಸ್ಪತ್ರೆ ಈಗ ಅಕ್ಷರಶಃ ಪಾಳು ಬಿದ್ದಂತಾಗಿದೆ. ಭಾರಿ ನಿರೀಕ್ಷೆಯೊಂದಿಗೆ ಈ ಆಸ್ಪತ್ರೆಯನ್ನು ಆರಂಭಿಸಲಾಗಿತ್ತಾದರೂ ಬಳಕೆಗೆ ಬಾರದಂತಾಗಿದೆ.

ಬ್ರಿಟನ್​ನಲ್ಲಿ ಕರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈವರೆಗೆ 1.30 ಲಕ್ಷ ಜನರಿಗೆ ಸೋಂಕು ತಗುಲಿದೆ ಹಾಗೂ 17,337 ಜನರು ಮೃತಪಟ್ಟಿದ್ದಾರೆ. ಹೀಗಿದ್ದರೂ ಈ ಆಸ್ಪತ್ರೆ ಯಾಕೆ ರೋಗಿಗಳ ಚಿಕಿತ್ಸೆಗೆ ಮುಂದಾಗುತ್ತಿಲ್ಲ ಎಂದರೆ, ಇಲ್ಲಿ ನಸ್​ರ್ಗಳ ಕೊರತೆ ಕಾಡುತ್ತಿದೆ. ಅದರಲ್ಲೂ ತುರ್ತು ನಿಗಾ ಘಟಕದಲ್ಲಿ ರೋಗಿಗಳ ಆರೈಕೆ ಮಾಡಬಲ್ಲ ನುರಿತ ದಾದಿಯರಿಲ್ಲ. ಇಲ್ಲಿ ವೈದ್ಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ದಿನವಿಡೀ ರೋಗಿಗಳ ಮೇಲೆ ನಿಗಾ ಇರಿಸಬೇಕಾದ ದಾದಿಯರು ಇಲ್ಲ ಎನ್ನುತ್ತಾರೆ ಆಸ್ಪತ್ರೆ ಅಧಿಕಾರಿಗಳು.

ಇದು ಈ ಆಸ್ಪತ್ರೆಯ ಸ್ಥಿತಿಯೊಂದೇ ಅಲ್ಲ, ಬ್ರಿಟನ್ನಿನ ಬಹುತೇಕ ಆಸ್ಪತ್ರೆಗಳಲ್ಲಿ ಇದೇ ಸಮಸ್ಯೆಯಾಗಿದೆ. ಜತೆಗೆ, ಆರೋಗ್ಯ ಸಿಬ್ಬಂದಿ ಕೂಡ ಸೋಂಕಿಗೆ ಒಳಗಾಗುತ್ತಿರುವುದು, ಅಗತ್ಯ ವೈಯಕ್ತಿಕ ಸುರಕ್ಷತಾ ಸಾಧನಗಳ ಕೊರತೆ ಕೂಡ ನರ್ಸ್​ಗಳು ಕಾರ್ಯ ನಿರ್ವಹಿಸಲು ಹಿಂಜರಿಯುವಂತೆ ಮಾಡಿದೆ. ಒಂದು ವೇಳೆ ಇಲ್ಲಿನ ಪೂರ್ಣ ಸಾಮರ್ಥ್ಯ ಬಳಸಿಕೊಳ್ಳಬೇಕೆಂದರೆ 16,000ಕ್ಕೂ ಅಧಿಕ ಸಿಬ್ಬಂದಿ ಬೇಕು. ಅವರನ್ನು ಎಲ್ಲಿಂದ ತರುವುದು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಆದರೆ, ಈ ವ್ಯವಸ್ಥೆ ತುರ್ತು ಸಂದರ್ಭಕ್ಕಾಗಿ ಹೆಚ್ಚುವರಿಯಾಗಿ ರೂಪಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net