ಯಿಪ್ಪೀ ಚೆಕ್​ಮೇಟ್​ ಚಾಲೆಂಜ್​: 25 ಮಕ್ಕಳೊಂದಿಗೆ ವಿಶ್ವ ನಂ. 1 ಕಾರ್ಲ್​ಸೆನ್​ ಚದುರಂಗದಾಟ

ಯಿಪ್ಪೀ ಚೆಕ್​ಮೇಟ್​ ಚಾಲೆಂಜ್​: 25 ಮಕ್ಕಳೊಂದಿಗೆ ವಿಶ್ವ ನಂ. 1 ಕಾರ್ಲ್​ಸೆನ್​ ಚದುರಂಗದಾಟ
ಯಿಪ್ಪೀ ಚೆಕ್​ಮೇಟ್​ ಚಾಲೆಂಜ್​: 25 ಮಕ್ಕಳೊಂದಿಗೆ ವಿಶ್ವ ನಂ. 1 ಕಾರ್ಲ್​ಸೆನ್​ ಚದುರಂಗದಾಟ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ವಿಶ್ವ ನಂ. 1 ಚೆಸ್​ ಆಟಗಾರ ಮ್ಯಾಗ್ನಸ್​ ಕಾರ್ಲ್​ಸೆನ್​ ಬೆಂಗಳೂರಿನಲ್ಲಿ ಶನಿವಾರ ನಡೆದ ಯಿಪ್ಪೀ ಚೆಕ್​ಮೇಟ್​ ಚಾಲೆಂಜ್​ನಲ್ಲಿ (yippee! checkmate challenge) 25 ಉದಯೋನ್ಮುಖ ಚೆಸ್​ ಆಟಗಾರರೊಂದಿಗೆ ಏಕಕಾಲದಲ್ಲಿ ಆಡಿದರು. ಬೆಂಗಳೂರು ಮತ್ತು ಚೆನ್ನೈನ ಈ ಮಕ್ಕಳು, ಐದು ಬಾರಿಯ ವಿಶ್ವ ಚಾಂಪಿಯನ್​ ಆಟಗಾರನ ಎದುರು ತಮ್ಮ ಚೆಸ್​ ಪ್ರತಿಭೆಯನ್ನು ಪ್ರದರ್ಶಿಸಿ ಗಮನಸೆಳೆದರು.

ಗ್ಲೋಬಲ್​ ಚೆಸ್​ ಲೀಗ್​ನಲ್ಲಿ ಆಡುವ ಅಲ್​ಪೈನ್​ ಎಪಿಎಲ್​ ಪೈಪರ್ಸ್​ ತಂಡದ ಸಹಯೋಗದೊಂದಿಗೆ ಯಿಪ್ಪಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಭಾರತದ ಗ್ರಾಂಡ್​ಮಾಸ್ಟರ್​ಗಳಾದ ಕೊನೆರು ಹಂಪಿ ಮತ್ತು ವಿದಿತ್​ ಗುಜರಾತಿ ಕೂಡ ಭಾಗವಹಿಸಿದರು. ಮೂವರು ಚೆಸ್​ ತಾರೆಯರೊಂದಿಗೆ ಮಕ್ಕಳು ಏಕಕಾಲದಲ್ಲಿ ಚೆಸ್​ ಪಂದ್ಯಗಳನ್ನು ಆಡಿ ಸಂಭ್ರಮಿಸಿದರು ಮತ್ತು ವಿಶೇಷ ಅನುಭವವನ್ನು ಪಡೆದುಕೊಂಡರು.
ವಿವಾನ್​ ಸಚ್​ದೇವ್​ ಅವರನ್ನು ಯಿಪ್ಪೀ ಚೆಕ್​ಮೇಟ್​ ಚಾಲೆಂಜ್​ನ ಅತ್ಯುತ್ತಮ ಆಟಗಾರರನ್ನಾಗಿ ಆರಿಸಲಾಯಿತು. ಮೂವರು ಆಟಗಾರರ ಎದುರಿನ ಪಂದ್ಯದಲ್ಲಿ ಅವರು ಬಲಿಷ್ಠ ಸ್ಥಿತಿಯಲ್ಲಿದ್ದುದು ಇದಕ್ಕೆ ಕಾರಣವಾಗಿತ್ತು.

ಕಾರ್ಯಕ್ರಮದಲ್ಲಿ ನಾಲ್ವರು ಆಯ್ದ ಮಕ್ಕಳಿಗೆ ಅವರ ಹೆತ್ತವರೊಂದಿಗೆ ಯಿಪ್ಪೀ ಮಾಡುವ ಸವಾಲನ್ನೂ ನೀಡಲಾಗಿತ್ತು. ಆರ್ಯ ಮಿಶ್ರಾ ಎಂಬ ಬಾಲಕನನ್ನು ಗ್ಲೋಬಲ್​ ಚೆಸ್​ ಲೀಗ್​ನಲ್ಲಿ ಅಲ್​ಪೈನ್​ ಪೈಪರ್ಸ್​ ತಂಡದ ಮೊದಲ ನಡೆಯನ್ನು ಇಡಲು ಆಯ್ಕೆ ಮಾಡಲಾಯಿತು. ಅಲ್​ಪೈನ್​ ಪೈಪರ್ಸ ತಂಡದ ಕೋಚ್​ ಹಾಗೂ ಗ್ರಾಂಡ್​ ಮಾಸ್ಟರ್​ ಪ್ರವಿಣ್​ ತಿಪ್ಸೆ ಮತ್ತು ಸ್ನ್ಯಾಕ್ಸ್ ಆಂಡ್​ ನೂಡಲ್ಸ್ ಫುಡ್​ ಡಿವಿಜನ್​ ಐಟಿಸಿ ಲಿಮಿಟೆಡ್​ನ ಮಾರ್ಕೆಟಿಂಗ್ ಮುಖ್ಯಸ್ಥ ಅತುಲ್​ ಪೂಜಾರ್​ ಕೂಡ ಹಾಜರಿದ್ದರು.
2013ರ ಬಳಿಕ ಮೊದಲ ಸಲ ಕಾರ್ಲ್​ಸೆನ್​ಗೆ ಹಲವು ಸವಾಲು!
ನಾರ್ವೆಯ ಚೆಸ್​ ತಾರೆ ಮ್ಯಾಗ್ನಸ್​ ಕಾಲ್​ಸೆನ್​ 2013ರ ಬಳಿಕ ಮೊದಲ ಬಾರಿ ತಾನು ಇಷ್ಟೊಂದು ಪಂದ್ಯಗಳನ್ನು ಏಕಕಾಲದಲ್ಲಿ ಆಡುತ್ತಿರುವುದಾಗಿ ಹೇಳಿದರು. ಆಗ ವಿಶ್ವ ಚಾಂಪಿಯನ್​ಷಿಪ್​ಗೆ ಮುನ್ನ ಚೆನ್ನೈನಲ್ಲಿ ಸ್ಥಳಿಯ ಮಕ್ಕಳೊಂದಿಗೆ ಏಕಕಾಲದಲ್ಲಿ ಹಲವು ಪಂದ್ಯ ಆಡುವ ಸವಾಲು ನೀಡಲಾಗಿತ್ತು. ಆದರೆ ಆಗ ನನಗೆ ವಿಮಾನ ಪ್ರಯಾಣದ ಬಳಲಿಕೆ ಇತ್ತು. ಹೀಗಾಗಿ ಕೆಲ ಪಂದ್ಯಗಳನ್ನು ಸೋತಿದ್ದೆ. ಆರ್​. ಪ್ರಜ್ನಾನಂದ ಮತ್ತು ಆರ್​ ವೈಶಾಲಿ ಕೂಡ ಆಗ ಎದುರಾಳಿ ಆಟಗಾರರಾಗಿದ್ದರು. ಆದರೆ ಈ ಬಾರಿ ಹಾಗೆ ಆಗದಿರಲಿ ಎಂದು ಅವರು 25 ಮಕ್ಕಳೊಂದಿಗೆ ಆಡುವ ಸವಾಲಿಗೆ ಮುನ್ನ ಹೇಳಿದರು. ಈ ಮಕ್ಕಳೊಂದಿಗೆ ಆಡಿ ನನಗೆ ಬಾಲ್ಯದ ದಿನಗಳ ನೆನಪಾಯಿತು ಎಂದು ವಿದಿತ್​ ಗುಜರಾತಿ ಹೇಳಿದರು. ಭಾರತದ ಮೊದಲ ಮಹಿಳಾ ಗ್ರಾಂಡ್​ಮಾಸ್ಟರ್​ ಕೊನೆರು ಹಂಪಿ, ಈ ವಿಶೇಷ ಅವಕಾಶ ಕಲ್ಪಿಸಿದ್ದಕ್ಕೆ ಯಿಪ್ಪೀಗೆ ಧನ್ಯವಾದಗಳು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net