ಬಾಲಕನಿಗೆ ಬೈಕ್ ಕೊಟ್ಟವರಿಗೆ 25 ಸಾವಿರ ರೂ. ದಂಡ

crime
Published on

ಹನೂರು : ಬಾಲಕನಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಮಾಲಕಿಗೆ ಕೊಳ್ಳೇಗಾಲ ಅಪರ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಸೋಮವಾರ 25 ಸಾವಿರ ರೂ.ದಂಡ ವಿಧಿಸಿದೆ. ಫೆ.26ರಂದು ಹನೂರು ತಾಲೂಕಿನ ಮಂಚಾಪುರ ಗ್ರಾಮದ ಮಹಿಳೆಯೊಬ್ಬರು ತನ್ನ ಹೆಸರಿನಲ್ಲಿ ನೋಂದಣಿಯಾಗಿದ್ದ ಬೈಕ್ ಅನ್ನು ಅದೇ ಗ್ರಾಮದ ಬಾಲಕನೊಬ್ಬನಿಗೆ ಚಾಲನೆಗೆ ನೀಡಿದ್ದರು. ಈ ವೇಳೆ ಬಾಲಕ ಬೈಕ್ ಚಲಾಯಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ವಾಹನದ ಮಾಲೀಕರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು. ಸೋಮವಾರ ಮಾಲಕಿ ನ್ಯಾಯಾಲಯಕ್ಕೆ ಹಾಜರಾಗಿ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ. ಮುಂದೆ ಇಂತಹ ಪ್ರಕರಣ ಕಂಡು ಬಂದಲ್ಲಿ ದಂಡದ ಜತೆಗೆ ಜೈಲು ಶಿಕ್ಷೆಯನ್ನೂ ನೀಡಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net