ಸಮಸ್ಯೆಗಳ ಇತ್ಯರ್ಥಕ್ಕೆ 25 ದಿನಗಳ ಗಡುವು: ರಾಜ್ಯ ಸರ್ಕಾರಕ್ಕೆ ರೈತರ ಎಚ್ಚರಿಕೆ

Farmers meeting
Published on

ಬೆಂಗಳೂರು: ಜಲಾಶಯಗಳಲ್ಲಿ ತುಂಬಿದ ಹೂಳು, ಬೆಳೆ ನಷ್ಟಕ್ಕೆ ಪರಿಹಾರ ವಿತರಿಸಲು ಅವೈಜ್ಞಾನಿಕ ಮಾನದಂಡ ಮುಂತಾದ ಗಂಭೀರ ಸಮಸ್ಯೆಗಳಿಗೆ ರಾಜ್ಯದ ರೈತರು ಸಿಲುಕಿದ್ದಾರೆ. ಬಗೆಹರಿಸಲು 30ರೊಳಗೆ ಕ್ರಮಕೈಗೊಳ್ಳದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಎಚ್ಚರಿಸಿದೆ.

ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ಸೇರಿ ರೈತ ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರ ಧೋರಣೆ ಬಗ್ಗೆ ಚರ್ಚಿಸಿತು. ಸಿಎಂ ಸಿದ್ದರಾಮಯ್ಯ ಮುಂದೆ ನಿರ್ದಿಷ್ಟ ಬೇಡಿಕೆಗಳನ್ನಿಟ್ಟು ಗಡುವು ವಿಧಿಸಲು ತೀರ್ಮಾನಿಸಿತು.

ತೆಲಂಗಾಣದ ಮಾದರಿಯಲ್ಲಿ ರಾಜ್ಯದ ಜಲಾಶಯಗಳ ಹೂಳೆತ್ತಿ, ಮೂಲ ಸಾಮರ್ಥ್ಯದಂತೆ ನೀರು ಶೇಖರಣೆ, ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ಪೂರೈಕೆ. ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಕೈಬಿಡಬೇಕು. ನೀರಾವರಿ ಪಂಪ್‌ಸೆಟ್‌ಗಳ ಅಕ್ರಮ ಸಕ್ರಮ ಯೋಜನೆ ಮರು ಜಾರಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರದ್ದು, ಪ್ರಕೃತಿ ವಿಕೋಪಗಳಿಗೆ ಪರಿಹಾರಕ್ಕೆ ಅವೈಜ್ಞಾನಿಕವಾಗಿರುವ ಮಾನದಂಡ ತಿದ್ದುಪಡಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದೆ.

ಜಿಂದಾಲ್ ಗೆ ಜಮೀನು ಕ್ರಯ ಬೇಡ

ಜಿಂದಾಲ್ ಕಂಪನಿಗೆ 3,677 ಎಕರೆ ಜಮೀನು ಕ್ರಯ ಕೈಬಿಡಬೇಕು. ಕಳಸಾಬಂಡೂರಿ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿ ಅನುಮತಿ ನೀಡುವಂತೆ ಒತ್ತಡ ತರಬೇಕು. ಕಬ್ಬು ಉತ್ಪನ್ನ ಇಳುವರಿ ಕಡಿಮೆ ತೋರುತ್ತಿರುವ ಕಾರಣ ಎ್ಆರ್‌ಪಿ ದರಕ್ಕಿಂತ ಹೆಚ್ಚುವರಿ ದರ ನಿಗದಿ, ಹಿಂದಿನ ವರ್ಷ ನಿಗದಿ ಮಾಡಿದ ಟನ್‌ಗೆ 150 ರೂ. ತಕ್ಷಣ ಪಾವತಿಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದೆ.

ಈ ಬೇಡಿಕೆಗಳನ್ನು 25 ದಿನಗಳೊಳಗೆ ಈಡೇರಿಸದಿದ್ದರೆ ರೈತ ಸಂಘಟನೆಗಳು ರಾಜ್ಯಾದ್ಯಂತ ಬೀದಿಗೆ ಇಳಿದು ಹೋರಾಟ ನಡೆಸಲಿವೆ. ವಿಧಾನಸೌಧಕ್ಕೂ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಲು ಸಭೆ ತೀರ್ಮಾನಿಸಿದೆ.

ಒಕ್ಕೂಟದ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಬಲ್ಲೂರು ರವಿಕುಮಾರ್, ವೀರನಗೌಡ ಪಾಟೀಲ್, ಕರಿಬಸಪ್ಪಗೌಡ, ಮಂಜೇಶ್ ಗೌಡ, ಕೊಟ್ರೇಶ್ ಚೌದ್ರಿ, ಜಗದೀಶ್, ಗುರುದೇವ್ ಇನ್ನಿತರ ರೈತ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net