

| ಬೇಲೂರು ಹರೀಶ ಬೆಂಗಳೂರು
ಶಿವಮೊಗ್ಗದ ಹುಣಸೋಡಿ ಬಳಿ ಕಲ್ಲು ಕ್ವಾರಿಯಲ್ಲಿ ಭೀಕರ ಜಿಲೆಟಿನ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ, ರಾಜ್ಯದ ವಿವಿಧ ಭಾಗಗಳಲ್ಲಿ ಲಗಾಮಿಲ್ಲದೆ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರ ಚರ್ಚೆಯ ಮುನ್ನೆಲೆಗೆ ಬಂದಿದೆ. ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕೃಪಾಕಟಾಕ್ಷದಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ನಡೆಯುತ್ತಿರುವ ಬಹುತೇಕ ಕ್ವಾರಿಗಳು ಸಂಭಾವ್ಯ ಅನಾಹುತಗಳಿಗೆ ಆಹ್ವಾನ ನೀಡುತ್ತಿವೆ.
ಕಳೆದ 5 ವರ್ಷಗಳಲ್ಲಿ ಬರೋಬ್ಬರಿ 2,452 ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 1,126 ಎಫ್ಐಆರ್ಗಳು ದಾಖಲಾಗಿವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಟಾಸ್ಕ್ಪೋರ್ಸ್ ಕಳೆದ 5 ವರ್ಷಗಳಲ್ಲಿ ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದ 7,938 ವಾಹನಗಳನ್ನು ಜಪ್ತಿ ಮಾಡಿ 9 ಕೋಟಿ ರೂ. ದಂಡ ವಸೂಲಿ ಮಾಡಿದೆ. ಅರಣ್ಯ ಸಂರಕ್ಷಣೆ ಕಾಯ್ದೆ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಪತ್ತೆಯಾದರೆ 2 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ.ವರೆಗೆ ದಂಡ ವಿಧಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ, ತಪ್ಪಿತಸ್ಥರಿಂದ ಒಂದಷ್ಟು ದಂಡ ವಸೂಲಿ ಮಾಡಿರುವುದು ಬಿಟ್ಟರೆ ಈವರೆಗೆ ಯಾರೊಬ್ಬರಿಗೂ ಜೈಲು ಶಿಕ್ಷೆ ಆಗಿಲ್ಲ.
ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಇಲಾಖೆಯಲ್ಲಿ ಪ್ರಬಲ ಕಾನೂನಿನ ಅಸ್ತ್ರ ಇಲ್ಲದಿರುವುದು ತಪ್ಪಿತಸ್ಥರಿಗೆ ವರದಾನವಾಗಿದೆ. ಸಿಕ್ಕಿಬಿದ್ದರೂ ದಂಡ ಕಟ್ಟುವ ಮಾಲೀಕರು ಮತ್ತೆ ಕಲ್ಲು ಗಣಿಗಾರಿಕೆಯಲ್ಲಿ ತೊಡಗುತ್ತಿದ್ದಾರೆ. ಜೈಲುಶಿಕ್ಷೆಯಾಗುವಂತಹ ಕಾನೂನು ಜಾರಿಯಾಗಬೇಕು ಎಂದು ಪರಿಸರ ತಜ್ಞರು ಆಗ್ರಹಿಸಿದ್ದಾರೆ.
ಅನುಮತಿ ಕಡ್ಡಾಯ: ಗಣಿಗಾರಿಕೆಗೆ ಅರಣ್ಯ ಸಂರಕ್ಷಣೆ ಕಾಯ್ದೆ 1980 2(1) ಮತ್ತು 2(3) ಹಾಗೂ ಅರಣ್ಯ ಸಂರಕ್ಷಾಣಾ ಕಾನೂನು 2003 (6) ಹಾಗೂ ಕೇಂದ್ರ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಬಳಿಕ ಗುತ್ತಿಗೆ ಆಧಾರದಲ್ಲಿ ನಿರ್ದಿಷ್ಟ (20 ವರ್ಷ ಗುತ್ತಿಗೆ) ಹಾಗೂ ನಿರ್ದಿಷ್ಟವಲ್ಲದ (30 ವರ್ಷ ಗುತ್ತಿಗೆ) ಎಂದು 2 ವಿಧದಲ್ಲಿ ಅವಕಾಶ ನೀಡಲಾಗುತ್ತದೆ. ರಾಜ್ಯದಲ್ಲಿ ಅಂದಾಜು 10 ರಿಂದ 13 ಸಾವಿರ ಎಕರೆ ಪ್ರದೇಶದಲ್ಲಿ ಗುತ್ತಿಗೆ ಆಧಾರದ ಮೇಲೆ ಸಾವಿರಾರು ಅಧಿಕೃತ ಕಲ್ಲು ಗಣಿಗಾರಿಕೆ ಕಾರ್ಯನಿರ್ವಹಿಸುತ್ತಿವೆ.
ಸ್ಪೋಟಕ್ಕೆ ಕಾರಣವೇನು?: ಕಲ್ಲು ಕ್ವಾರಿಯಲ್ಲಿ ಅಮೋನಿಯಂ ನೈಟ್ರೇಟ್ ಹಾಗೂ ಪ್ಯೂಸ್ ಸೇರಿ ಇನ್ನಿತರ ಸ್ಪೋಟಕ ವಸ್ತುಗಳನ್ನು ಪ್ರತ್ಯೇಕವಾಗಿ ಸಂಗ್ರಹಣೆ ಇಡದಿರುವುದು, ಅಧಿಕೃತವಾಗಿ ಪರವಾನಗಿ ಹೊಂದಿರುವವರಿಂದ ಬ್ಲಾಸ್ಟಿಂಗ್ ಮಾಡಿಸದಿರುವುದು, ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸ್ಪೋಟಕ ವಸ್ತುಗಳನ್ನು ಒಟ್ಟಿಗೆ ಇಟ್ಟಿರುವುದು, ಪೊಲೀಸರ ಬಿಗಿ ಕ್ರಮ ಇಲ್ಲದಿರುವುದು ಹಾಗೂ ಮಾಲೀಕರ ನಿರ್ಲಕ್ಷ್ಯ ಸೇರಿ ಇನ್ನಿತರ ವೈಜ್ಞಾನಿಕ ನಿಯಮಗಳನ್ನು ಪಾಲನೆ ಮಾಡದಿರುವುದು ಸ್ಪೋಟಕ್ಕೆ ಪ್ರಮುಖ ಕಾರಣಗಳು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಿಳಿಸಿದೆ.
ತನ್ನಿಂತಾನೆ ಸ್ಪೋಟಗೊಳ್ಳುವುದಿಲ್ಲ: ಅಮೋನಿಯಂ ನೈಟ್ರೇಟ್ ಬಿಳಿ ಹರಳು ರೂಪದಲ್ಲಿರುತ್ತದೆ. ನೀರಿನಲ್ಲಿ ಕರಗಬಲ್ಲ ರಾಸಾಯನಿಕ ವಸ್ತುವಾಗಿದೆ. ಇದನ್ನು ಗಣಿ ಮತ್ತು ನಿರ್ಮಾಣ ಚಟುವಟಿಕೆಗಳಲ್ಲಿ ಬಳಸುವ ಸ್ಪೋಟಕಗಳ ತಯಾರಿಕೆಗೆ ಬಳಸಲಾಗುತ್ತದೆ. ಸಾಮಾನ್ಯವಾಗಿ ತನ್ನಿಂತಾನೆ ಇದು ಸ್ಪೋಟಗೊಳ್ಳುವುದಿಲ್ಲ. ಯಾವುದೇ ಕಾರಣದಿಂದ ಇದು ಇತರ ಸ್ಪೋಟಕ ವಸ್ತುಗಳ ಸಂಪರ್ಕಕ್ಕೆ ಬಂದಾಗ ಮಾತ್ರ ಸ್ಫೋಟ ಸಂಭವಿಸುತ್ತದೆ. ಅಮೋನಿಯಂ ನೈಟ್ರೇಟ್ನ ಉತ್ಪಾದನೆ, ಪರಿವರ್ತನೆ, ಪ್ಯಾಕಿಂಗ್, ಆಮದು, ರಫ್ತು, ಸಾಗಣೆ, ದಾಸ್ತಾನು ಹಾಗೂ ಮಾರಾಟಗಳು ಕೆಲ ಕಠಿಣ ನಿಯಮಗಳ ವ್ಯಾಪ್ತಿಗೆ ಬರುತ್ತವೆ. ಜನದಟ್ಟಣೆ ಹೆಚ್ಚಾಗಿರುವ ಪ್ರದೇಶದಲ್ಲಿ ದೊಡ್ಡಮಟ್ಟದಲ್ಲಿ ದಾಸ್ತಾನು ಮಾಡುವುದನ್ನು ನಿಷೇಧಿಸಲಾಗಿದೆ.
ಎಲ್ಲೆಲ್ಲಿ ಗಣಿಗಾರಿಕೆ?: ಇಲಾಖೆ ಕಾರ್ಯಾಚರಣೆ ವೇಳೆ ಅರಣ್ಯ ಸಂರಕ್ಷಣೆ ಕಾಯ್ದೆ ಮತ್ತು ಅರಣ್ಯ ಸಂರಕ್ಷಣಾ ಕಾನೂನು ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿರುವುದು ಪತ್ತೆಯಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಪ್ಪಳ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಾಮರಾಜನಗರ, ಬೀದರ್, ದಕ್ಷಿಣ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಹೆಚ್ಚು ಅಕ್ರಮ ಕಲ್ಲು ಗಣಿಗಾರಿಕೆಗಳು ನಡೆಯುತ್ತಿವೆ.
ಐವರ ಸಾವು, ಮೂವರ ವಶ: ಶಿವಮೊಗ್ಗದ ಹುಣಸೋಡು ಬಳಿ ಕ್ರಷರ್ನಲ್ಲಿ ಗುರುವಾರ ರಾತ್ರಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಜಮೀನು ಮಾಲೀಕ, ಕ್ರಷರ್ ಪಾಲುದಾರರು ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈವರೆಗೆ ಐದು ಜನ ಮೃತಪಟ್ಟಿದ್ದು, ಅವರಲ್ಲಿ ನಾಲ್ವರ ಗುರುತು ಪತ್ತೆಯಾಗಿದೆ. ಇನ್ನೂ ಕೆಲವರ ಮೊಬೈಲ್ಗಳು ಸ್ವಿಚ್ಆಫ್ ಆಗಿದ್ದು, ಅವರ ಸುಳಿವು ಸಿಕ್ಕಿಲ್ಲ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸಂತಾಪ: ಶಿವಮೊಗ್ಗದಲ್ಲಿ ನಡೆದ ಸ್ಪೋಟದಲ್ಲಿ ಹಲವರು ಮೃತರಾಗಿರುವ ವಿಚಾರ ನೋವು ತಂದಿದೆ. ಗಾಯಗೊಂಡವರು ಬೇಗ ಚೇತರಿಕೆ ಕಾಣಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತ ರಿಗೆ ರಾಜ್ಯ ಸರ್ಕಾರ ಅಗತ್ಯ ನೆರವು ನೀಡುತ್ತಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ರಾಜಕಾರಣಿಗಳ ಕೃಪಾಕಟಾಕ್ಷ: ಅಕ್ರಮ ಗಣಿಗಾರಿಕೆಗೆ ಸ್ಥಳೀಯ ರಾಜಕಾರಣಿಗಳ ಕೃಪಾಕಟಾಕ್ಷವಿದೆ ಎಂಬ ಆರೋಪಗಳಿವೆ. ಚುನಾವಣೆ ಸಂದರ್ಭದಲ್ಲಿ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಗಣಿ ಮಾಲೀಕರ ಪಾತ್ರ ಪ್ರಮುಖವಾಗಿರುತ್ತದೆ. ಹಾಗಾಗಿ, ಗಣಿಗಾರಿಕೆಗೆ ಅನುಮತಿ ಕೊಡಿಸುವುದರಲ್ಲಿ ಹಾಗೂ ಅಕ್ರಮ ಗಣಿಗಾರಿಕೆ ನಡೆಸುವುದರಲ್ಲಿ ಸ್ಥಳೀಯ ಮುಖಂಡರ ಕೈವಾಡವಿರುತ್ತದೆ ಎಂಬುದನ್ನು ಇಲಾಖೆ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಅಲ್ಲದೆ, ರಾಜಕಾರಣಿಗಳಿಗೆ ಹಿಂಬಾಲಕರೇ ಹೆಚ್ಚು ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವ ಬಗ್ಗೆ ಗಂಭೀರ ಆರೋಪಗಳಿವೆ.
ಅಕ್ರಮ ಪತ್ತೆಗೆ ಸಮಿತಿ: ರಾಜ್ಯಾದ್ಯಂತ ಇರುವ ಅಕ್ರಮ ಕ್ರಷರ್ ಮತ್ತು ಕಲ್ಲು ಕ್ವಾರಿಗಳ ಪತ್ತೆಗೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಲು ಸರ್ಕಾರ ನಿರ್ಧರಿಸಿದೆ. ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ರ್ಚಚಿಸಿ ಯಾರ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂಬುದನ್ನು ತೀರ್ವನಿಸಲಾಗುವುದು ಎಂದಿದ್ದಾರೆ.
ದೇಶದ ಸಂಪತ್ತನ್ನು ರಾಜಾರೋಷವಾಗಿ ಲೂಟಿ ಮಾಡುತ್ತಿದ್ದರೂ ಸರ್ಕಾರಗಳು ಕಣ್ಮುಚ್ಚಿ ಕುಳಿತಿವೆ. ಅಧಿಕೃತ ಹಾಗೂ ಅನಧಿಕೃತ ಗಣಿಗಾರಿಕೆ ಸಂಪೂರ್ಣವಾಗಿ ನಿಲ್ಲಿಸಬೇಕು. ಈಗಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ ಇದ್ದರೂ ಗಣಿಗಾರಿಕೆಯಿಂದ ಆಗುವ ಅನಾಹುತಗಳನ್ನು ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ. | ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಪರಿಸರವಾದಿ