

Roller Coaster: ಅಮ್ಯೂಸ್ಮೆಂಟ್ ಪಾರ್ಕಿನಲ್ಲಿ ರೋಲರ್ ಕೋಸ್ಟರ್ನಿಂದ ಬಿದ್ದು 24 ವರ್ಷದ ಮಹಿಳೆಯೊಬ್ಬರು ತಮ್ಮ ಭಾವಿ ಪತಿಯ ಕಣ್ಣ ಮುಂದೆಯೇ ದುರಂತ ಸಾವಿಗೀಡಾಗಿರುವ ಘಟನೆ ಕಳೆದ ಗುರುವಾರ ಸಂಜೆ 6.30ರ ಸುಮಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಮೃತಳನ್ನು ಪ್ರಿಯಾಂಕಾ ಎಂದು ಗುರುತಿಸಲಾಗಿದೆ. ಈಕೆ ಚಾಣಕ್ಯಪುರಿಯ ಟೆಲಿಕಾಂ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕಪಶೇರಾ ಗಡಿಯ ಬಳಿಯ ಫನ್ ಅಂಡ್ ಫುಡ್ ವಿಲೇಜ್ ಎಂಬ ಉದ್ಯಾನವನದಲ್ಲಿ ಈ ಅಪಘಾತ ಸಂಭವಿಸಿದೆ.
ಪ್ರಿಯಾಂಕಾ ತನ್ನ ಭಾವಿ ಪತಿ ಅಖಿಲ್ ಜೊತೆ ಪಾರ್ಕ್ಗೆ ಬಂದಿದ್ದರು. ರೋಲರ್ ಕೋಸ್ಟರ್ನಲ್ಲಿ ಕುಳಿತಿದ್ದಾಗ, ಸ್ವಿಂಗ್ ಮೇಲಕ್ಕೆ ತಲುಪಿದ ಸಂದರ್ಭದಲ್ಲಿ ಸ್ಟ್ಯಾಂಡ್ ಕುಸಿದು ಪ್ರಿಯಾಂಕಾ ಕೆಳಗೆ ಬಿದ್ದರು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಕೆಯ ಜೀವವನ್ನು ಉಳಿಸಲಾಗಲಿಲ್ಲ. ನಂತರ ನಿಖಿಲ್, ಪ್ರಿಯಾಂಕಾ ಅವರ ಕುಟುಂಬ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ಆರಂಭಿಸಿದ್ದಾರೆ.
ಪ್ರಿಯಾಂಕಾ ಅವರ ಸಹೋದರ ಮೋಹಿತ್ ಅವರು, ಪಾರ್ಕಿನ ಅಧಿಕಾರಿಗಳ ನಿರ್ಲಕ್ಷ್ಯವೇ ಆಕೆಯ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಪಾರ್ಕಿನಲ್ಲಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗಿಲ್ಲ ಮತ್ತು ಅಪಘಾತದ ನಂತರ ಪ್ರಿಯಾಂಕಾ ಅವರನ್ನು ಆಸ್ಪತ್ರೆಗೆ ತಡವಾಗಿ ಕರೆದೊಯ್ಯಲಾಯಿತು ಎಂದು ಕುಟುಂಬ ಆರೋಪಿಸಿದೆ.
ಅಪಘಾತದ ನಂತರ ರೋಲರ್ ಕೋಸ್ಟರ್ ಒಳಗೊಂಡ ಪಾರ್ಕಿನ ಒಂದು ಭಾಗವನ್ನು ನಿರ್ವಹಣೆಗಾಗಿ ಮುಚ್ಚಲಾಗಿದೆ ಎಂದು ಕುಟುಂಬವು ಹೇಳಿಕೆ ನೀಡಿದೆ. ಆದರೆ, ಈ ಘಟನೆಯ ಬಗ್ಗೆ ಉದ್ಯಾನವನದ ಅಧಿಕಾರಿಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಿಯಾಂಕಾ ಮತ್ತು ನಿಖಿಲ್ ಅವರ ನಿಶ್ಚಿತಾರ್ಥವು 2023ರ ಜನವರಿಯಲ್ಲಿ ನಡೆಯಿತು. ಈ ಜೋಡಿಯ ವಿವಾಹವು ಮುಂದಿನ ವರ್ಷ ಫೆಬ್ರವರಿಯಲ್ಲಿ ನಿಗದಿಯಾಗಿತ್ತು. ಅಷ್ಟರಲ್ಲೇ ಪ್ರಿಯಾಂಕಾ ದುರಂತ ಸಾವಿಗೀಡಾಗಿದ್ದಾರೆ. (ಏಜೆನ್ಸೀಸ್)