

ವಿಲಾಸ ಮೇಲಗಿರಿ ಬೆಂಗಳೂರು
ಕೋವಿಡ್ ನಂತರದ ಮೂರು ವರ್ಷದಲ್ಲಿ ಕಾರ್ಮಿಕ ಕಾರ್ಡ್ ಪಡೆದವರ ಸಂಖ್ಯೆ ಗಣನೀಯ ಇಳಿಕೆ ಕಾಣುತ್ತಿರುವುದು ಹಲವು ಅನುಮಾನ ಹುಟ್ಟುಹಾಕಿದೆ.
ಮೂರು ವರ್ಷದ ಹಿಂದೆ 54 ಲಕ್ಷದಷ್ಟಿದ್ದ ಕಾರ್ಮಿಕ ಕಾರ್ಡ್ ಈಗ 30 ಲಕ್ಷಕ್ಕೆ ಇಳಿಕೆಯಾಗಿವೆ. ಸುಮಾರು 24 ಲಕ್ಷ ಕಾರ್ಡ್ ನವೀಕರಣವೇ ಆಗಿಲ್ಲ(24 lakh labor cards inactive in three years?)! ನಕಲಿ ಕಾರ್ಡ್ ಸೃಷ್ಟಿಸಿ ಸರ್ಕಾರದ ಸವಲತ್ತು ಪಡೆಯುತ್ತಿರುವ ಕುರಿತು ಕಾರ್ಮಿಕ ಇಲಾಖೆ ಕಟ್ಟುನಿಟ್ಟಿನ ತಪಾಸಣೆ ನಡೆಸಿ, ಅಕ್ಟೋಬರ್‌ನಲ್ಲಿ 2,46,951 ಕಾರ್ಡ್‌ಗಳನ್ನು ಅಮಾನತುಗೊಳಿಸಿತ್ತು. ಇಷ್ಟೊಂದು ಕಾರ್ಡ್ ನಕಲಿಯಾಗಿರುವುದು ಇಲಾಖೆಯನ್ನೇ ಬೆಚ್ಚಿಬೀಳಿಸಿತ್ತು.
ಕಾರ್ಡ್ ನವೀಕರಣಕ್ಕೆ ಕಟ್ಟುನಿಟ್ಟಿನ ನಿಯಮ ರೂಪಿಸಿರುವುದರಿಂದ ಮೂರು ವರ್ಷದಲ್ಲಿ 24 ಲಕ್ಷ ಕಾರ್ಡ್‌ದಾರರು ನವೀಕರಣ ಮಾಡಿಕೊಳ್ಳುವುದರಿಂದ ಹಿಂದೆ ಸರಿದಿದ್ದಾರೆ. ಹಾವೇರಿಯಲ್ಲಿ 2.94 ಲಕ್ಷ ಕಟ್ಟಡ ಕಾರ್ಮಿಕರು ಕಾರ್ಡ್ ಪಡೆದುಕೊಂಡಿದ್ದರು. ಇಷ್ಟೊಂದು ಕಾರ್ಮಿಕರು ತಲಾ 90 ದಿನ ಕೆಲಸ ಮಾಡಿದರೆ ಎಷ್ಟು ಪ್ರಮಾಣದ ಕಾಮಗಾರಿ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಕಳುಹಿಸಿ ಪರಿಶೀಲಿಸಿದಾಗ 1,69,140 ಕಾರ್ಡ್‌ಗಳು ಬೋಗಸ್ ಕಂಡು ಬಂದಿದ್ದವು. ಎಲ್ಲ ಜಿಲ್ಲೆಗಳಲ್ಲೂ ಪರಿಶೀಲಿಸಿದಾಗ 2.46 ಲಕ್ಷ ನಕಲಿ ಕಾರ್ಡ್‌ಗಳು ಬೆಳಕಿಗೆ ಬಂದಿದ್ದವು.
ಮಹಾರಾಷ್ಟ್ರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದರೂ 16 ಲಕ್ಷ ಕಾರ್ಮಿಕರು ಮಾತ್ರ ನೋಂದಣಿ ಮಾಡಿಸಿಕೊಂಡಿದ್ದರು. ನೋಂದಣಿಗೆ ವ್ಯವಸ್ಥಿತ ಸೌಲಭ್ಯ ಕಲ್ಪಿಸಿದಾಗಲೂ ಕರ್ನಾಟಕಕ್ಕೆ ಹೋಲಿಸಿದರೆ ನೋಂದಣಿ ಪ್ರಮಾಣ ಮೂರರಷ್ಟು ಕಡಿಮೆ ಇತ್ತು. ಆಗ ಕರ್ನಾಟಕದಲ್ಲಿ 54 ಲಕ್ಷ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿದ್ದರು. ಬಳಿಕ ಈ ಪ್ರಮಾಣ ಕುಸಿಯುತ್ತಾ ಬಂತು.
ಮೂರು ವರ್ಷದ ಹಿಂದೆ 11 ಲಕ್ಷ ವಿದ್ಯಾರ್ಥಿಗಳು ಕಾರ್ಮಿಕರ ಕಾರ್ಡ್‌ನಡಿ ವಿದ್ಯಾರ್ಥಿವೇತನ ಪಡೆದಿದ್ದರೆ, ಈ ಸಾಲಿನಲ್ಲಿ ಅರ್ಜಿ ಸಲ್ಲಿಸಿದವರ ಸಂಖ್ಯೆ 2.50 ಲಕ್ಷಕ್ಕೆ ಇಳಿಕೆಯಾಗಿದೆ. ಇಲ್ಲೂ ಬೋಗಸ್ ದಾಖಲೆ ನೀಡಿ ಸ್ಕಾಲರ್‌ಶಿಪ್ ಪಡೆದ ಗುಮಾನಿ ಇದೆ.
ಬೆಂಗಳೂರಿನಲ್ಲಿ ಮೆಟ್ರೋ ಸೇರಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಿಂದ ಬೃಹತ್ ಪ್ರಮಾಣದ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿ ನಡೆಯುತ್ತಿವೆ. ಆದರೆ, ಇಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ಸಂಖ್ಯೆ ಕೇವಲ 3 ರಿಂದ 4 ಲಕ್ಷ. ಹಾಗಾಗಿ ನೋಂದಣಿ ಪ್ರಮಾಣ ಹೆಚ್ಚಿಸಲು ತಂತ್ರಜ್ಞಾನ, ಮೊಬೈಲ್ ವ್ಯಾನ್ ಬಳಕೆಗೆ ಕಾರ್ಮಿಕ ಇಲಾಖೆ ಮುಂದಾಗಿದೆ. ಕಾರ್ಮಿಕರು ಮೊಬೈಲ್ ಮೂಲಕ ದುಡಿಮೆಯ ದಿನಗಳನ್ನು ದಾಖಲಿಸಲು ಆ್ಯಪ್ ಮೂಲಕ ಇ-ಹಾಜರಾತಿಗೆ ಅವಕಾಶ ಮಾಡಿಕೊಡಲಾಗಿದೆ. ದೊಡ್ಡ ದೊಡ್ಡ ನಿರ್ಮಾಣ ಕಂಪನಿಗಳ ಜತೆ ಸಹಯೋಗ ಸಾಧಿಸಲಾಗುತ್ತಿದೆ. ೇಸ್ ಐಡಿ ಮತ್ತು ಥಂಬ್ ಇಂಪ್ರೆಷನ್ ಮೂಲಕವೂ ಹಾಜರಾತಿ ಇದೆ. ಜತೆಗೆ ಮ್ಯಾನ್ಯೂವಲ್ ಸೌಲಭ್ಯವೂ ಇದೆ. ಬಿಲ್ಡರ್‌ಗಳಿಗೆ ಒಂದು ವರ್ಷದ ಹಾಜರಾತಿ ಪುಸ್ತಕವನ್ನೂ ಕಾರ್ಮಿಕ ಇಲಾಖೆ ನೀಡುವ ಮೂಲಕ ಹಾಜರಾತಿ ದೃಢಪಡಿಸಿಕೊಳ್ಳುತ್ತಿದೆ.
2 ಲಕ್ಷ ರೂ.ಪರಿಹಾರ: ಕಟ್ಟಡ ಕಾರ್ಮಿಕರು ಅವಘಡ, ಅಪಘಾತ ಮತ್ತಿತರ ಸಂದರ್ಭಗಳಲ್ಲಿ ಮೃತಪಟ್ಟರೆ ಪರಿಹಾರಧನ 5 ಲಕ್ಷ ರೂ. ಗಳನ್ನು ಕುಟುಂಬಗಳಿಗೆ ನೀಡಲಾಗುತ್ತದೆ. ಆದರೆ, ಕಾರ್ಮಿಕರು ಮಂಡಳಿಯಲ್ಲಿ ನೋಂದಣಿ ಮಾಡದ ಕಾರಣ ಅನೇಕರಿಗೆ 2 ಲಕ್ಷ ರೂ. ಮಾತ್ರ ಪರಿಹಾರ ವಿತರಿಸಲಾಗಿದೆ.
ಕಾರ್ಮಿಕರ ನೋಂದಣಿಯಲ್ಲಿ ಪಾರದರ್ಶಕತೆ ತರಲು ಇಲಾಖೆ 43 ಅಂಬೇಡ್ಕರ್ ಸೇವಾ ಕೇಂದ್ರ ತೆರೆಯಲು ಮುಂದಾಗಿದೆ. ಅಲ್ಲದೆ 43 ಮೊಬೈಲ್ ವ್ಯಾನ್‌ಗಳು ವರ್ಷದ 365 ದಿನವೂ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿ ನೋಂದಣಿ/ಹಾಜರಾಗಿ ದೃಢೀಕರಿಸುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ೆಬ್ರವರಿಯಲ್ಲಿ ಯೋಜನೆಗೆ ಚಾಲನೆ ಸಿಗುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿ ಇಲಾಖೆ ಯಶ ಕಂಡಿದೆ.
ನಿಷ್ಕ್ರಿಯಗೊಂಡ 24 ಲಕ್ಷ ಕಾರ್ಡ್‌ಗಳಲ್ಲಿ ನಿಷ್ಕ್ರಿಯ, ಬೋಗಸ್ ಎಷ್ಟು ಎಂಬುದೂ ಗೊಂದಲದ ಗೂಡಾಗಿದೆ. ಕಾರ್ಡ್ ಪಡೆದವರು ಇಲಾಖೆಗೆ ವಾಪಸ್ ನೀಡುತ್ತಿಲ್ಲ. ಜತೆಗೆ ನವೀಕರಣವನ್ನೂ ಮಾಡಿಸಿಕೊಳ್ಳುತ್ತಿಲ್ಲ. ಈ ಕಾರ್ಡ್‌ದಾರರು ಸರ್ಕಾರದಿಂದ ಪಡೆದ ಸವಲತ್ತುಗಳ ಪ್ರಮಾಣದ ತನಿಖೆಯಾಗಬೇಕು. ಬೋಗಸ್ ದಾಖಲೆ ನೀಡಿ ಸರ್ಕಾರದ ಸೌಲಭ್ಯ ಪಡೆದಿದ್ದಲ್ಲಿ ಅಂತಹವರಿಗೆ ಶಿಕ್ಷೆ ವಿಧಿಸಬೇಕು. ಆ ಮೂಲಕ ಅರ್ಹರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ.