

ಮೈಸೂರು: ಜೀರುಂಡೆ ಪ್ರಕಾಶನದಿಂದ ಕಲಾಸುರುಚಿ ಮತ್ತು ಚಾರು ಸಾಂಸ್ಕೃತಿಕ ಪ್ರತಿಷ್ಠಾನಗಳ ಸಹಯೋಗದೊಂದಿಗೆ ಕುವೆಂಪುನಗರದ ಸುರುಚಿ ರಂಗಮನೆಯಲ್ಲಿ ಮಾರ್ಚ್ 23 ರಂದು ಬೆಳಗ್ಗೆ 11 ಗಂಟೆಗೆ ‘ಥೇರೀಗಾಥಾ ಕಾಣಿಸಿದ ಹೆಣ್ಣು -ಬೌದ್ಧಧರ್ಮದಲ್ಲಿ ಮಹಿಳೆ’ ಕೃತಿ ಕುರಿತು ಸಂವಾದ ಆಯೋಜಿಸಲಾಗಿದೆ.
ಸುಮಾರು 2500 ವರ್ಷಗಳ ಹಿಂದೆಯೇ ಬುದ್ಧನು ಮಹಿಳೆಯರಿಗೆ ಭಿಕ್ಕುಣಿಯರಾಗಲು ಅನುಮತಿ ನೀಡಿ, ಅವರೆ ಸಂಘವನ್ನು ಮುನ್ನಡೆಸಲು ಅವಕಾಶ ನೀಡಿದ ಬಗ್ಗೆ, ಅದರಿಂದ ಎದುರಾದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಅವನು ತೆಗೆದುಕೊಂಡ ನಿರ್ಧಾರಗಳು ಮತ್ತು ಭಿಕ್ಕುಣಿಯರು ಅನುಭವಿಸಿದ ಹತ್ತಾರು ದೈಹಿಕ, ಮಾನಸಿಕ ತಲ್ಲಣಗಳ ಬಗ್ಗೆ ಕೃತಿ ಬೆಳಕು ಚೆಲ್ಲುತ್ತದೆ. ಭಿಕ್ಕುಣಿಯರು ತಮ್ಮ ಖಾಸಗಿ ಅಡ್ಡಿ-ಆತಂಕಗಳನ್ನು ಬುದ್ಧನ ಬಳಿ ಹಂಚಿಕೊಳ್ಳುತ್ತಿದ್ದ ಪರಿಯಂತೂ ಆಶ್ಚರ್ಯಕರವಾದದ್ದು.
ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ, ಮಹಿಳಾ ಪರ ಹೋರಾಟಗಾರ್ತಿ ಡಾ.ದು.ಸರಸ್ವತಿ ಇವರಿಬ್ಬರೂ ಕೃತಿಯ ಬಗ್ಗೆ, ಬುದ್ಧನ ಜನಪರ ನಿಲುವಿನ ಬಗ್ಗೆ ಮತ್ತು ಸ್ತ್ರೀಪರ ಸೂಕ್ಷ್ಮ ಸಂವೇದನೆಗಳ ಬಗ್ಗೆ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.