

ಸಾಗರ: ಮೊದಲ ಬಾರಿಗೆ ಲಾಲ್ಗುಡಿ ಡೇ ಕಾರ್ಯಕ್ರಮವನ್ನು ಏ.22ರಂದು ಹಮ್ಮಿಕೊಳ್ಳಲಾಗಿದೆ ಎಂದು ವಿದ್ವಾನ್ ಹೊಸಳ್ಳಿ ವೆಂಕಟರಾವ್ ತಿಳಿಸಿದರು.
ಮತ್ತೂರು-ಹೊಸಹಳ್ಳಿಯ ಸಂಕೇತಿ ಸಂಗೀತ ಸಭಾ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವು ಸಾಗರದ ಕುಡುಪಲಿ ಸದಾನಂದ ಸ್ವರಾಲಯದಲ್ಲಿ ಸಂಜೆ 5ರಿಂದ ಆರಂಭಗೊಳ್ಳಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪದ್ಮಶ್ರೀ ಲಾಲ್ಗುಡಿ ಜಿ. ಜಯರಾಮನ್ ಅವರ ಸ್ಮರಣಾರ್ಥ ಆಯೋಜಿಸಿರುವ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸುವರು. ಸಂಗೀತ ಸಭಾ ಅಧ್ಯಕ್ಷ ಹೊಸಹಳ್ಳಿ ವಿದ್ವಾನ್ ವೆಂಕಟ ರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಮಾ.ಸ.ನಂಜುಂಡಸ್ವಾಮಿ ಬಾಗವಹಿಸುವರು. ಲಾಲ್ಗುಡಿ ಜಿ. ಜಯರಾಮನ್ ಶಿಷ್ಯರಾದ ವಿದ್ವಾನ್ ಹೊಸಹಳ್ಳಿ ವೆಂಕಟರಾವ್, ವಿದ್ವಾನ್ ಎಚ್.ಕೆ.ಸುಬ್ಬರಾವ್, ವಿದ್ವಾನ್ ಎಚ್.ವಿ.ರಘುರಾಮ್ ಅವರಿಂದ ವಯೋಲಿನ್ ವಿಶೇಷ ಕಾರ್ಯಕ್ರಮ ಇದ್ದು, ವಿ.ಸುನೀಲ್, ಸುಬ್ರಹ್ಮಣ್ಯ ಮೃದಂಗದಲ್ಲಿ, ವಿ.ಕಿರಣ, ಕುಮಾರ್ ಖಂಜರ್‌ನಲ್ಲಿ ಸಾಥ್ ನೀಡುವರು ಎಂದರು.
ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಪದ್ಮಭೂಷಣ ಲಾಲ್ಗುಡಿ ಜಯರಾಮನ್ ಅವರ ಸ್ಥಾನ ಅತ್ಯಂತ ವಿಶಿಷ್ಟ. ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಮೂಡಿಬಂದ ಲಾಲ್ಗುಡಿ ಜಯರಾಮನ್ ತಮ್ಮ ವಿಶಿಷ್ಟ ನುಡಿಸುಗಾರಿಕೆಯಿಂದ ವಯೋಲಿನ್‌ಗೆ ಹೆಮ್ಮೆಯ ಸ್ಥಾನ ತಂದು ಕೊಟ್ಟಿದ್ದಾರೆ. ವಿಶ್ವದಾದ್ಯಂತ ವಯೋಲಿನ್ ನಾದವನ್ನು ಪಸರಿಸಿದ ಅವರು 2013ರ ಏ.22ರಂದು ನಿಧನರಾದರು. ಅಂದಿನಿಂದ ಅವರ ಶಿಷ್ಯವರ್ಗ ಸಂಕೇತಿ ಸಂಗೀತ ಸಭಾ ಮೂಲಕ ಲಾಲ್ಗುಡಿ ಡೇ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾ.ಸ.ನಂಜುಡಸ್ವಾಮಿ, ವಿದುಷಿ ಅಮೃತಾ ಶಿವಮೊಗ್ಗ, ಅಶೋಕ್ ಹೆಗ್ಗೋಡು ಇದ್ದರು.